ಜಿಲ್ಲೆ ನಾಳೆ ದಿನದ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿದೆ. ಮಡಿಕೇರಿಯ ಕೋಟೆ ಆವರಣದಲ್ಲಿ ಪ್ರತಿ ವರ್ಷದಂತೆ ಅತಿಥಿಗಳು ಕೂರುವ ಜಾಗದಲ್ಲಿ ಮಳೆ ಬೀಳದಂತೆ ಶಾಮಿಯಾನ ಹಾಕಲಾಗುತ್ತಿದೆ.ಅದರ ಎದುರು ಬದಿ ತೆರೆದ ಮೈದಾನದಲ್ಲಿ ಪೊಲೀಸರು, ಎನ್.ಸಿ.ಸಿ., ಸ್ಕೌಟ್ಸ್, ಮಕ್ಕಳು ಪಥ ಸಂಚಲನ ಮಾಡಬೇಕಿದೆ!ಈ ಮಳೆ ಗಾಳಿಯಲ್ಲಿ ಸಾಧ್ಯವಿದೆಯೇ?ಪ್ರತಿವರ್ಷ ತುಂತುರು ಮಳೆಯಲ್ಲೂ ಈ ವ್ಯವಸ್ಥೆ ನಿರಾಯಾಸವಾಗಿ ನಡೆಯುತ್ತಿದ್ದರೂ, ಈ ಬಾರಿಯ ಪರಿಸ್ಥಿತಿ ಬೇರೆಯೇ ಇದೆ. ರಕ್ಕಸ ಮಳೆಯೊಂದಿಗೆ ಬಿರುಗಾಳಿಯ ಅನುಭವ ಬೇರೆ. ಜೊತೆಯಲ್ಲಿ ಕೊರೆಯುವ ಚಳಿ. ಕನಿಷ್ಟ 2ರಿಂದ 3 ಗಂಟೆ ಮಳೆಯಲ್ಲಿ ಮಕ್ಕಳು ನಿಂತರೆ ಅನಾಹುತಕ್ಕೆ ಆಹ್ವಾನವಿದ್ದಂತೆ.

ಬಹುಶಃ ಹತ್ತು ನಿಮಿಷ ಈ ಮಳೆಯಲ್ಲಿ ಒದ್ದೆಯಾದರೂ ಆರೋಗ್ಯ ಕೆಡುವಂತಹ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಪಥ ಸಂಚಲನ ಕೈಬಿಟ್ಟು, ಹಳೇ ಕೋಟೆ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸುವದು ಒಳಿತು. ವೀರಾಜಪೇಟೆ- ಸೋಮವಾರಪೇಟೆಗಳ ಸ್ಥಿತಿಯೂ ಹೊರತಾಗಿಲ್ಲ. ಇಲ್ಲವಾದಲ್ಲಿ ಪಥ ಸಂಚಲನದ ಜಾಗದಲ್ಲಿ ಮಳೆ ತಡೆಯಲು ಶಾಮಿಯಾನ ಹಾಕುವದು ಅಗತ್ಯ.

ಈ ಬಗ್ಗೆ ‘ಶಕ್ತಿ’ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದು, ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುವದಾಗಿ ಹೇಳಿದ್ದಾರೆ. ಶಾಸಕ ಬೋಪಯ್ಯ ಅವರು ಕೂಡಾ ಗಮನ ಸೆಳೆದಿರುವದಾಗಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ತುರ್ತು ಕೆಲಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರು ‘ಶಕ್ತಿ’ ಕಳುಹಿಸಿದ ಸಂದೇಶಕ್ಕೆ ಸ್ಪಂದಿಸಿ ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸುವದಾಗಿ ಭರವಸೆ ನೀಡಿದ್ದಾರೆ.

-ಸಂಪಾದಕ.