ಮಡಿಕೇರಿ, ಆ. 13: ಭಾರೀ ಗಾಳಿ - ಮಳೆಯಿಂದಾಗಿ ನಗರದಿಂದ 8 ಕಿ.ಮೀ. ದೂರದ ಮದೆ ಗ್ರಾ.ಪಂ. ವ್ಯಾಪ್ತಿಯ ಕರ್ತೋಜಿ ಎಂಬಲ್ಲಿ ಬೃಹತ್ ಪ್ರಮಾಣದ ಭೂ ಕುಸಿತವುಂಟಾಗಿ, ಮೈಸೂರು - ಬಂಟ್ವಾಳ ಹೆದ್ದಾರಿ ಸಂಪರ್ಕವು ಇಂದು ಬೆಳಿಗ್ಗೆಯಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಬೆಳಿಗ್ಗೆ ಹಠಾತ್ ಸಂಭವಿಸಿದ ಭೂಕುಸಿತದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತಾಯಿತು.ದೂರದ ಮಂಗಳೂರು, ಉಡುಪಿ ಇತರೆಡೆಗಳಿಂದ ಈ ಹೆದ್ದಾರಿಗಾಗಿ ಮಡಿಕೇರಿ ಮುಖಾಂತರ ಮೈಸೂರು - ಬೆಂಗಳೂರು ಸೇರಿದಂತೆ ಬೇರೆಡೆಗೆ ತೆರಳಬೇಕಿದ್ದ ರಾಜ್ಯ ರಸ್ತೆ ಸಾರಿಗೆ ಸಹಿತ ಇತರ ಬಸ್‍ಗಳು ಮತ್ತು ಇತರ ವಾಹನಗಳು ಮಾರ್ಗ ಮಧ್ಯೆ ಸಿಲುಕಿಕೊಂಡವು; ಇನ್ನು ಮೈಸೂರು, ಬೆಂಗಳೂರು, ಮಡಿಕೇರಿ ಮುಂತಾದೆಡೆಯಿಂದ ದಕ್ಷಿಣ ಕನ್ನಡದೆಡೆಗೆ ಹೊರಟ ವಾಹನಗಳಿಗೂ ಸಂಚರಿಸಲಾರದೆ ತೊಂದರೆ ಎದುರಾಯಿತು.
ವಿಷಯ ತಿಳಿಯುತ್ತಿದ್ದಂತೆ ಪೊಲೀಸ್, ಅರಣ್ಯ, ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆಯ ತಂಡಗಳು ಅಗ್ನಿ ಶಾಮಕ ಸಿಬ್ಬಂದಿ ಸಹಿತ ಸ್ಥಳಕ್ಕೆ ದೌಡಾಯಿಸಿತಾದರೂ, ಸುಮಾರು 100 ಅಡಿ ಎತ್ತರದಿಂದ ಕಲ್ಲುಬಂಡೆಗಳ ಸಹಿತ ಮರಗಳು ಬುಡಗಳೊಂದಿಗೆ ರಸ್ತೆಗೆ ಅಪ್ಪಳಿಸಿರುವ ಕಾರಣ; ಮಾರ್ಗದ ಮಣ್ಣು ತೆರವಿಗೆ ತೊಡಕು ಉಂಟಾಯಿತು.
ಬಳಿಕ ಜೆಸಿಬಿ ಯಂತ್ರದ ಮೂಲಕ ಮದ್ಯಾಹ್ನದವರೆಗೆ ಕಾರ್ಯಾಚರಣೆ ನಡೆಸುವ ಪ್ರಯತ್ನ ಸಾಗಿದರೂ, ಮೇಲಿನಿಂದ ಮತ್ತೆ ಮಣ್ಣು ಕುಸಿಯಲಾರಂಭಿಸಿ ಸಾಕಷ್ಟು ಬವಣೆ ಪಡಬೇಕಾಯಿತು.
ಸಮರೋಪಾದಿ ಕೆಲಸ : ಮಧ್ಯಾಹ್ನ ಬಳಿಕ ಮತ್ತೆ ಐದು ಜೆಸಿಬಿ ಯಂತ್ರಗಳನ್ನು ತರಿಸಿಕೊಂಡು, ಹೆದ್ದಾರಿಯ ಮಣ್ಣು ತೆರವಿಗೆ ಸಮರೋಪಾದಿಯಲ್ಲಿ ಕೆಲಸವನ್ನು ಮುಂದುವರೆಸಲಾಯಿತಾದರೂ, ಮಳೆ ನೀರಿನಿಂದ ರಸ್ತೆ ಕೆಸರಿನ ಕೊಳದಂತೆ ಬಾಸವಾಗತೊಡಗಿತು. ಒಂದೆಡೆ ರಸ್ತೆಯ ಮಣ್ಣು ತೆರವುಗೊಳಿಸುತ್ತಿದ್ದಂತೆಯೇ ಮೇಲಿನಿಂದ ಇನ್ನಷ್ಟು ಭೂಕುಸಿತ ಎದುರಿಸಬೇಕಾಯಿತು.
ಪರ್ಯಾಯ ಮಾರ್ಗ : ಪರಿಸ್ಥಿತಿಯ ಗಂಭೀರತೆ ಅರ್ಥೈಸಿಕೊಂಡ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು, ಮಂಗಳೂರು ಹಾಗೂ ಮೈಸೂರು ಮತ್ತು ಹಾಸನ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ,
(ಮೊದಲ ಪುಟದಿಂದ) ಮಡಿಕೇರಿ - ಬಂಟ್ವಾಳ ನಡುವೆ ಸಂಚರಿಸುವ ಎಲ್ಲಾ ವಾಹನಗಳನ್ನು ಇತ್ತ ಬಿಡದಂತೆ ಸಲಹೆ ಮಾಡಿದರಲ್ಲದೆ, ಪರ್ಯಾಯ ಸಂಚಾರಕ್ಕೆ ಗಮನ ಹರಿಸುವಂತೆ ಗಮನ ಸೆಳೆದರು.
ಆ ಮೇರೆಗೆ ದಕ್ಷಿಣ ಕನ್ನಡದ ಎಲ್ಲಾ ವಾಹನಗಳು ಚಾರ್ಮಾಡಿ ಘಾಟ್, ಸುಬ್ರಹ್ಮಣ್ಯ ರಸ್ತೆ ಹಾಗೂ ಹಾಸನ ಮುಖಾಂತರ ಕ್ರಮಿಸಲು ವ್ಯವಸ್ಥೆ ಕೈಗೊಳ್ಳಲಾಯಿತು. ಇತ್ತ ಕುಶಾಲನಗರದಿಂದಲೇ ಮಂಗಳೂರು ಕಡೆ ಹೋಗುವ ವಾಹನಗಳನ್ನು ಹಾಸನ ಮಾರ್ಗವಾಗಿ ತೆರಳಲು ವ್ಯವಸ್ಥೆ ರೂಪಿಸಲಾಯಿತು. ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ವಾಹನಗಳು ಕರಿಕೆ ಮಾರ್ಗವಾಗಿ ತೆರಳುವಂತೆಯೂ ವ್ಯವಸ್ಥೆಗೊಳಿಸಲಾಗಿದೆ.
ಇತ್ತ ಬಿರುಸಿನಿಂದ ಹೆದ್ದಾರಿ ಮಣ್ಣು ತೆರವು ಕಾರ್ಯವೂ ಮುಂದುವರಿಸಲಾಯಿತು. ಒಂದೆಡೆ ಎತ್ತರದ ಬೆಟ್ಟ ಸಾಲು ಇಲ್ಲಿ ರಸ್ತೆಗೆ ಜರಿಯುತ್ತಿದ್ದರೆ, ಜೆಸಿಬಿ ಮೂಲಕ ತೆರವುಗೊಳಿಸುವ ಮಣ್ಣು ಹೆದ್ದಾರಿಯ ಕೆಳಭಾಗ ಹರಿಯುವ ಹೊಳೆಯಿಂದಾಗಿ ಇನ್ನಷ್ಟು ಸಮಸ್ಯೆಗೆ ಕಾರಣವಾಯಿತು.
ಶಾಸಕ ಬೋಪಯ್ಯ ಭೇಟಿ : ವಿಷಯ ತಿಳಿದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಡಿವೈಎಸ್‍ಪಿ ಸುಂದರರಾಜ್, ಇಂಜಿನಿಯರ್ ಚನ್ನಕೇಶವ ಮೊದಲಾದವರೊಂದಿಗೆ ಸಾಕಷ್ಟು ಚರ್ಚಿಸಿದರು. ತೆರವುಗೊಳಿಸುವ ಮಣ್ಣನ್ನು ರಸ್ತೆ ಬದಿ ಸುರಿದು ಹೊಳೆಯಿಂದ ಮತ್ತೆ ಸಮಸ್ಯೆಯಾಗದಂತೆ ಬೇರೆಡೆಗೆ ಒಯ್ದು ಹಾಕುವಂತೆ ಅಧಿಕಾರಿಗಳ ಗಮನ ಸೆಳೆದರು.
ಈ ಸಂದರ್ಭ ತಹಶೀಲ್ದಾರ್ ಕುಸುಮ, ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಮೇದಪ್ಪ, ಪ್ರದೀಪ್, ಗ್ರಾಮಾಂತರ ಠಾಣಾಧಿಕಾರಿ ಚೇತನ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ತೆರವು ಕಾರ್ಯಾಚರಣೆಯಲ್ಲಿ ತೊಡಗಿದರು. ಬಿಜೆಪಿ ಪ್ರಮುಖ ಬೆಲ್ಲು ಸೋಮಯ್ಯ, ಕೆ.ಜಿ. ಕೀರ್ತನ್, ಬೆಪ್ಪುರನ ಮೇದಪ್ಪ ಮೊದಲಾದವರು ಶಾಸಕರೊಂದಿಗೆ ಹಾಜರಿದ್ದರು.