ವೀರಾಜಪೇಟೆ, ಆ. 12: ಭಾರತೀಯ ಜನತಾ ಪಾರ್ಟಿ ಐದು ವರ್ಷಗಳ ಅವಧಿಯ ಪಟ್ಟಣ ಪಂಚಾಯಿತಿಯ ಆಡಳಿತ ನಡೆಸಿದರೂ ಪಾರದರ್ಶಕದ ಆಡಳಿತವಿಲ್ಲದೆ ಅಭಿವೃದ್ಧಿಗೂ ಹಿನ್ನಡೆ ಉಂಟಾಗಿದೆ. ಜನಪರ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ವಿಫಲಗೊಂಡಿದೆ ಇದಕ್ಕೆ ಪಟ್ಟಣದ ರಸ್ತೆಗಳೆಲ್ಲ ಗುಂಡಿ ಬಿದ್ದು ಹಾನಿಗೊಳಗಾಗಿರುವದೇ ಸಾಕ್ಷಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಆರೋಪಿಸಿದರು.
ಇಲ್ಲಿನ ದೊಡ್ಡಟ್ಟಿ ಚೌಕಿಯ ಭಾಗ್ಯಲಕ್ಷ್ಮಿ ವಾಣಿಜ್ಯ ಸಂಕೀರ್ಣದ ಕಟ್ಟಡದಲ್ಲಿ ಪಕ್ಷದ ಚುನಾವಣಾ ಪ್ರಚಾರದ ಕಚೇರಿಯನ್ನು ಆರಂಭಿಸಿ ನಂತರ ಕಾರ್ಯಕರ್ತರು, ಹಿತೈಷಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆಯಲಿದ್ದು ಆಡಳಿತದ ಸೂತ್ರವನ್ನು ಹಿಡಿಯಲಿದೆ. ಬಿಜೆಪಿ ಆಡಳಿತದಿಂದ ಬೇಸತ್ತಿರುವ ಜನತೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.
ಇದೇ ಸಂದರ್ಭ ಪಕ್ಷದ ಕಾರ್ಯಕರ್ತರುಗಳಾದ ಎಂ.ಎಸ್. ಪೂವಯ್ಯ, ಮಾಳೇಟಿರ ಬೋಪಣ್ಣ, ಶೀಬಾ ಪೃಥ್ವಿನಾಥ್, ನಗರ ಸಮಿತಿ ಅಧ್ಯಕ್ಷ ಜಿ.ಜಿ. ಮೋಹನ್, ಇದ್ರೀಶ್, ಎಂ.ಎಂ. ಶಶಿಧರನ್, ಕಾರ್ಯಕರ್ತರು ಹಾಜರಿದ್ದರು.
ಪಕ್ಷದ ಪ್ರಮುಖ ಕೋಲತಂಡ ಬೋಪಯ್ಯ ಅವರು ರಿಬ್ಬನ್ ಕತ್ತರಿಸಿ ಕಚೇರಿ ಉದ್ಘಾಟಿಸಿದರು.