ಕರಿಕೆ, ಆ. 12: ಇಲ್ಲಿಗೆ ಸಮೀಪದ ಚೆತ್ತುಕಾಯ ಪಚ್ಚೆ ಪಿಲಾವು ಎಂಬಲ್ಲಿ ಕೆಲ ದಿನಗಳ ಹಿಂದೆ ಧಾಳಿ ಮಾಡಿ ನಾಯಿ, ಮೇಕೆಗಳನ್ನು ಬಲಿಪಡೆದು ನಾಪತ್ತೆಯಾಗಿದ್ದ ಚಿರತೆ ಮತ್ತೆ ಗ್ರಾಮಕ್ಕೆ ಧಾಳಿ ಮಾಡಿ ನಾಯಿಯೊಂದನ್ನು ಹೊತ್ತೊಯ್ದಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಪಚ್ಚೆಪಿಲಾವು ಎಂ.ಬಿ.ಸುಂದರ ನಾಯ್ಕ ಎಂಬವರ ಮನೆಯ ಜಗುಲಿಯಲ್ಲಿ ಮಲಗಿದ್ದ ನಾಯಿಯನ್ನು ತಡರಾತ್ರಿ ಚಿರತೆ ಹೊತ್ತೊಯ್ದಿದ್ದು ಮನೆಯ ಹಿತ್ತಲಿನಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಸ್ಥಳೀಯ ಉಪ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾತ್ರಿ ಗಸ್ತು ತಿರುಗಿ ಪಟಾಕಿ ಸಿಡಿಸಿದರೂ ಕೂಡ ಚಿರತೆ ಪದೇ ಪದೇ ಧಾಳಿ ನಡೆಸುತ್ತಿರುವದರಿಂದ ಗ್ರಾಮದ ಜನತೆ ತಮ್ಮ ಜಾನುವಾರು ಹಾಗೂ ಇತರೆ ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಜಿಲ್ಲೆಯ ಹಿರಿಯ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿದು ಸ್ಥಳಾಂತರಿಸಲು ಸೂಕ್ತ ರೀತಿಯಲ್ಲಿ ಕ್ರಮವಹಿಸಲು ಗ್ರಾಮಸ್ಥರು ಆಗ್ರಹಿಸಿದ್ದು, ತಪ್ಪಿದಲ್ಲಿ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದಾರೆ.
-ಸುಧೀರ್