ಮಡಿಕೇರಿ, ಆ. 12: ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಗಳಿಗೆ ‘ಗ್ರಾಹಕರ ಸೇವೆ ಮತ್ತು ವ್ಯವಹಾರ ಅಭಿವೃದ್ಧಿ’ ಕುರಿತು ಶಿಕ್ಷಣ ಕಾರ್ಯಕ್ರಮವನ್ನು ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ಸಹಕಾರ ಕ್ಷೇತ್ರ ಅತ್ಯಂತ ವಿಶಾಲವಾಗಿದ್ದು, ರಾಷ್ಟ್ರದ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ ಎಂದರು. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಶೇ. 26, ಗೊಬ್ಬರ ಶೇ. 27, ಸಕ್ಕರೆ ಶೇ. 5, ರಬ್ಬರ್ ಶೇ. 18, ಗೋದಿ ಶೇ. 34 ಹೀಗೆ ಸಹಕಾರದ ಪಾಲಿದ್ದು, ಅತ್ಯಂತ ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಇದು ಸ್ಪರ್ಧಾತ್ಮಕಯುಗ. ಹಿಂದೆ ಇದ್ದ ಚೆಕ್ ಹಾಗೂ ಎ.ಟಿ.ಎಂ. ಪದ್ಧತಿ ಈಗ ಕಡಿಮೆಯಾಗಿದ್ದು, ಬಹುತೇಕರು ಮೊಬೈಲ್ ಬ್ಯಾಂಕಿಂಗ್ ಅನುಸರಿಸುತ್ತಿದ್ದಾರೆ. ಜಿಲ್ಲೆಯ 35,000 ಜನರಿಗೆ ಕೆ.ಸಿ.ಸಿ. ಸಾಲ, 2500 ಜನರಿಗೆ ಅಭಿವೃದ್ಧಿ ಸಾಲ ನೀಡಲಾಗಿದೆ ಎಂದರು. ಬೆಂಗಳೂರಿನ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಮತ್ತು ಕೃಷಿ ಸಿಬ್ಬಂದಿ ತರಬೇತಿ ಸಂಸ್ಥೆಯ ನಿವೃತ್ತ ವ್ಯವಸ್ಥಾಪಕ ಎಸ್.ಜಿ. ಕುಲಕರ್ಣಿ ಗ್ರಾಹಕರ ಸೇವೆ ಮತ್ತು ವ್ಯವಹಾರ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಯೂನಿಯನ್ ನಿರ್ದೇಶಕರಾದ ಕನ್ನಂಡ ಸಂಪತ್, ಎನ್.ಎ. ರವಿ ಬಸಪ್ಪ ಉಪಸ್ಥಿತರಿದ್ದರು. ಯೂನಿಯನ್ ನಿರ್ದೇಶಕ ಕೊಡಪಾಲು ಗಣಪತಿ ಸ್ವಾಗತಿಸಿ, ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ ನಿರೂಪಿಸಿದರು. ವ್ಯವಸ್ಥಾಪಕಿ ಆರ್. ಮಂಜುಳ ವಂದಿಸಿದರು.