ಸೋಮವಾರಪೇಟೆ, ಆ. 12: ತಾಲೂಕು ಬಂಟರ ಯಾನೆ ನಾಡವರ ಸಂಘದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ‘ಆಟಿದ ಕೂಟ’ ಕಾರ್ಯಕ್ರಮ ನಡೆಯಿತು. ಸಮಾಜ ಬಾಂಧವರು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಬಂಟರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನಾಂಗ ಬಾಂಧವರು ಜಿಲ್ಲೆಯಲ್ಲಿ ಸಂಘಟನೆಯ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಪುತ್ತೂರು, ಹಾರಾಡಿಯ ಪ್ರಶಾಂತ್ ಅನಂತಾಡಿ ಮಾತನಾಡಿ, ಆಟಿ ಮಾಸವು ಕಠಿಣ ಮಾಸವೆಂಬ ನಂಬಿಕೆ ಜನರಲ್ಲಿ ಉಳಿದಿದೆ. ಅಂದಿನ ಕಾಲದಲ್ಲಿ ಕೃಷಿ ಚಟುವಟಿಕೆಯಿಂದ ರೈತಾಪಿ ವರ್ಗ ವಿಶ್ರಾಂತಿ ಪಡೆಯಲು ಇಂತಹ ಸಮಾರಂಭಗಳನ್ನು ನಡೆಸಿಕೊಂಡು ಬರುತ್ತಿದ್ದರು. ಇದು ತುಳುನಾಡಿನ ಶ್ರೀಮಂತ ಪದ್ದತಿಯಾಗಿದ್ದು, ಇಂದಿನ ಮಕ್ಕಳಿಗೂ ಸಂಸ್ಕøತಿಯನ್ನು ತಿಳಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಪೋಷಕರ ಪಾತ್ರವೂ ಮುಖ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಮಿತಿ ಅಧ್ಯಕ್ಷ ಬಿ.ವಿ. ಜನಾರ್ಧನ್ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಕಾರ್ತಿಕ್ ಶೆಟ್ಟಿ, ಕುಶಾಲನಗರ ಆರತಿ ಹೆಲ್ತ್ ಕೇರ್ ಸೆಂಟರ್‍ನ ಡಾ.ಹರಿ ಎ. ಶೆಟ್ಟಿ, ಹಟ್ಟಿಹೊಳೆ ನಾರಾಯಣಶೆಟ್ಟಿ, ತಾಲೂಕು ಕಾರ್ಯದರ್ಶಿ ಸಂತೋಷ್ ರೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಆಟಿ ಸಂಭ್ರಮೋತ್ಸವ ಅಂಗವಾಗಿ ಜನಾಂಗದ ಮಕ್ಕಳು, ಮಹಿಳೆಯರು ಹಾಗು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.