ಸೋಮವಾರಪೇಟೆ, ಆ. 12: ತಾಲೂಕಿನಾದ್ಯಂತ ಭಾರೀ ಗಾಳಿ ಮಳೆಯಾಗುತ್ತಿದ್ದು, ದಿನದ 24 ಗಂಟೆಯೂ ಮಳೆ ಭೋರ್ಗರೆಯುತ್ತಿದೆ. ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪರಿಸ್ಥಿತಿಯಂತೂ ಹೇಳ ತೀರದಂತಾಗಿದ್ದು, ಕೃಷಿ ಕೊಳೆಯುತ್ತಿದ್ದರೆ, ಹರಗ ಗ್ರಾಮದಲ್ಲಿ ಮಳೆಗೆ ಮರ ಉರುಳಿ ಬಿದ್ದು ವಾಸದ ಮನೆಗೆ ಹಾನಿಯಾಗಿದೆ.

ಹರಗ ಗ್ರಾಮದ ಹೆಚ್.ಎಂ. ಸೀತಮ್ಮ ಎಂಬವರಿಗೆ ಸೇರಿದ ವಾಸದ ಮನೆಯ ಒಂದು ಪಾಶ್ರ್ವದ ಮೇಲೆ ಮರ ಬಿದ್ದಿದ್ದು, ಪರಿಣಾಮ ಛಾವಣಿಯ ಹೆಂಚು ಮತ್ತು ಗೋಡೆಗೆ ಹಾನಿಯಾಗಿದೆ. ಸ್ಥಳಕ್ಕೆ ಶಾಂತಳ್ಳಿ ಗ್ರಾ.ಪಂ. ಸದಸ್ಯ ತ್ರಿಶೂಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಪಾಯಕಾರಿ ಮರಗಳು: ಸೋಮವಾರಪೇಟೆ-ಮಡಿಕೇರಿ ಮುಖ್ಯ ರಸ್ತೆಯ ಕೋವರ್‍ಕೊಲ್ಲಿ-ಐಗೂರು ಮಧ್ಯೆ ಹತ್ತಾರು ಮರಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಭಾರೀ ಮಳೆಯಿಂದಾಗಿ ಬರೆ ಕುಸಿತಗೊಂಡು ಮಣ್ಣಿನ ಸವಕಳಿಯೂ ಹೆಚ್ಚಾಗಿರುವದರಿಂದ ಬೇರುಗಳು ಹೊರ ಕಾಣುತ್ತಿವೆ.

ಭಾರೀ ಗಾಳಿಗೆ ಈ ಮರಗಳು ರಸ್ತೆಗೆ ಉರುಳುವ ಸಾಧ್ಯತೆಯಿದೆ. ತಕ್ಷಣ ಸಂಬಂಧಿಸಿದ ತೋಟ ಮಾಲೀಕರು ಇಂತಹ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಮುಂದಾಗಬೇಕು ಎಂದು ಕಾಜೂರಿನ ಅವಿಲಾಶ್ ಪತ್ರಿಕೆಯೊಂದಿಗೆ ಒತ್ತಾಯಿಸಿದ್ದಾರೆ.