ಮಡಿಕೇರಿ, ಆ. 12: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಧಾರಕಾರ ಮಳೆಯಿಂದಾಗಿ ಬೆಳೆ ಹಾನಿ ಆಗಿ ರೈತರಿಗೆ ನಷ್ಟವಾಗಿರುವದನ್ನು ಸುದೀರ್ಘವಾಗಿ ಚರ್ಚಿಸಲಾಯಿತು. ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲು ಸರಕಾರಕ್ಕೆ ಮನವಿ ಸಲ್ಲಿಸಬೇಕೆಂದು ನಿರ್ಣಯ ಅಂಗೀಕರಿಸಲಾಯಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ರೈತರಿಗೆ ಉತ್ತಮವಾದ ಸಂಬಂಧ ಇರುವದರಿಂದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ರೈತರಿಗೆ ಉತ್ತಮ ಸೌಲಭ್ಯ ಒದಗಿಸಿಕೊಡಲು ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತೀರ್ಮಾನ ಕೈಗೊಂಡಿತು.

ಅತಿವೃಷ್ಟಿಯಿಂದ ನಿಯಂತ್ರಿತ ಹುಟ್ಟುವಳಿಗಳಾದ ಕರಿಮೆಣಸು, ಅಡಿಕೆ, ಭತ್ತ, ತರಕಾರಿಗಳಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ಕೃಷಿ ಮಾರಾಟ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಬೇಕೆಂದು ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.