ಶನಿವಾರಸಂತೆ, ಆ. 12: ದುಂಡಳ್ಳಿ ಗ್ರಾ.ಪಂ. ಮಾಸಿಕ ಸಭೆಯು ಇತ್ತೀಚೆಗೆ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ವರ್ಷ ಇಲ್ಲಿಯವರೆಗೆ 82 ಇಂಚು ಮಳೆಯಾಗಿದ್ದು, ಕಾಫಿ, ಕಾಳುಮೆಣಸು, ಭತ್ತ, ಶುಂಠಿ, ಕಿತ್ತಳೆ ಕೊಳೆ ರೋಗದಿಂದ ಶೇ. 90 ಭಾಗ ರೈತರಿಗೆ ನಷ್ಟ ಉಂಟಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಅಧಿಕ ಮಳೆಯಿಂದ ರಸ್ತೆಗಳು ಹಾಳಾಗಿ, ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ನೀಲಮ್ಮ, ಮುತ್ತಮ್ಮ, ಜಾನಕಿ, ಸುಳುಗಳಲೆ ಗ್ರಾಮದ ಸರ್ಫುನ್ನೀಸಾ, ಶಾಹೀನ್, ಪುಟ್ಟಮ್ಮ, ಮಾದ್ರೆ ಗ್ರಾಮದ ಪಾರ್ವತಮ್ಮ, ಗಂಗಾಧರ, ಬದರೂರು ಹೊಸ ಕಾಲೋನಿಯ ಸಿಕಂದರ್ ಪಾಷ, ಜಯಮ್ಮ, ದೊಡ್ಡಕೊಳತ್ತೂರಿನ ಪ್ರಿಯ, ಬಸಮ್ಮ, ರಾಮಶೆಟ್ಟಿ, ಕಮಲಮ್ಮ, ಸೌಮ್ಯ, ಕಲ್ಪನ, ಸುಜಾತ, ಕಮಲಮ್ಮ, ರತ್ನಮ್ಮ, ಜಾನಕಿ, ಗಣೇಶ್ ಅವರುಗಳಿಗೆ ಸೇರಿದ ಸುಮಾರು 20 ಮನೆಗಳು ಕುಸಿತಗೊಂಡಿದ್ದು, ನಷ್ಟಕ್ಕೆ ಒಳಗಾದ ಫಲಾನುಭವಿಗಳಿಗೆ ಬಸವ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

2018-19ನೇ ಸಾಲಿನ 14ನೇ ಹಣಕಾಸಿನಲ್ಲಿ ಸರಕಾರದಿಂದ ಬಿಡುಗಡೆಯಾದ ರೂ. 8 ಲಕ್ಷದ 80 ಸಾವಿರಕ್ಕೆ ಕ್ರಿಯಾ ಯೋಜನೆಗಾಗಿ ಪಟ್ಟಿ ತಯಾರಿಸ ಲಾಯಿತು. ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಸ್ವಚ್ಛತೆಗಾಗಿ ಜನಜಾಗೃತಿ ಮತ್ತು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅಧ್ಯಕ್ಷರು ಮಾಹಿತಿ ನೀಡಿದರು.