ಕುಶಾಲನಗರ, ಆ, 11: ಕುಶಾಲನಗರ ಪಟ್ಟಣ ಪಂಚಾಯ್ತಿಯ ಅಂಗಡಿ ಮಳಿಗೆಯ ಬಾಡಿಗೆ ಕರಾರಿಗೆ ನಕಲಿ ಸಹಿಯನ್ನು ಸೃಷ್ಟಿಸಿರುವ ಪ್ರಕರಣದ ಬಗ್ಗೆ ಸಿವಿಲ್ ಮತ್ತು ಕ್ರಿಮಿನಲ್ ಕ್ರಮಗಳನ್ನು ಜರುಗಿಸುವಂತೆ ಮುಖ್ಯಾಧಿಕಾರಿಗಳಿಗೆ ಪಂಚಾಯಿತಿಯ ಕಾನೂನು ಸಲಹೆಗಾರರು ಕಾನೂನು ಪರಾಮರ್ಶನ ವರದಿ ನೀಡಿದ್ದಾರೆ.

ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ವಾಣಿಜ್ಯ ಮಳಿಗೆ ಸಂಖ್ಯೆ 1,2,6,9 ಮತ್ತು 10ರ ಮಳಿಗೆಗಳ ಬಾಡಿಗೆ ಕರಾರನ್ನು 13 ವರ್ಷಗಳ ಅವಧಿಗೆ ನವೀಕರಣ ಮಾಡಿದ್ದು ಇದು ಕಾನೂನು ಬಾಹಿರವಾಗಿದೆ ಎಂದು ಜಿಲ್ಲಾಡಳಿತ ಹಿಂದಿನ ಅವಧಿಯ ಮುಖ್ಯಾಧಿಕಾರಿ ರಮೇಶ್ ಎಂಬವರಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ ಅದು ತನ್ನ ಸಹಿ ಆಗಿರುವದಿಲ್ಲ. ನಕಲಿ ಮಾಡಿರುವದಾಗಿ ಅಂದಿನ ಮುಖ್ಯಾಧಿಕಾರಿ ರಮೇಶ್ ಲಿಖಿತ ಹೇಳಿಕೆ ನೀಡಿರುವ ಹಿನೆÀ್ನಲೆಯಲ್ಲಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕುಶಾಲನಗರ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿತ್ತು.

ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದ ಸಂದರ್ಭ ಮೇಲ್ನೋಟಕ್ಕೆ ಸಾಬೀತಾದಂತೆ ಕರಾರು ನವೀಕರಣಗೊಂಡ ಅವಧಿಯಲ್ಲಿ ಕುಶಾಲನಗರ ಪಪಂ ಅಧ್ಯಕ್ಷರಾಗಿ ಡಿ.ಕೆ.ತಿಮ್ಮಪ್ಪ ಅವರು ಅಧಿಕಾರದಲ್ಲಿದ್ದ ಸಂದರ್ಭ ಪ್ರಕರಣ ನಡೆದಿದೆ. ಮಳಿಗೆ ಬಾಡಿಗೆದಾರರಾದ ಡಿ.ಎಸ್.ಜಗದೀಶ್ ಮತ್ತು ಡಿ.ಕೆ.ತಿಮ್ಮಪ್ಪ ಅವರು ಸಂಬಂಧಿಕರಾಗಿದ್ದು ಇನ್ನುಳಿದಂತೆ ಸಂತೋಷ್‍ಕುಮಾರ್ ಮತ್ತು ಶೀಲಾ ಪ್ರತಾಪ್ ಎಂಬವರುಗಳು ಬಾಡಿಗೆ ಕರಾರನ್ನು 13 ವರ್ಷಗಳ ಅವಧಿಗೆ ನವೀಕರಣ ಮಾಡಿರುವದು ಪ್ರಾಥಮಿಕ ತನಿಖೆಯಲ್ಲಿ ಖಚಿತಗೊಂಡಿದೆ.

ಪಪಂ ಆಡಳಿತ ಮಂಡಳಿಯ ಮಾಸಿಕ ಸಭೆಯಲ್ಲಿ ಬಾಡಿಗೆ ಅವಧಿಯ ನವೀಕರಣಗೊಳ್ಳುವ ಬಗ್ಗೆ ಯಾವದೇ ಠರಾವುಗಳು ಆಗಿರುವ ಬಗ್ಗೆ ದಾಖಲೆಗಳು ಕಂಡುಬಂದಿಲ್ಲ. ಕೇವಲ 4 ಮಂದಿಗೆ ಮಾತ್ರ ನವೀಕರಣ ಮಾಡಿದ್ದು ಉಳಿದವರಿಗೆ ನವೀಕರಣ ಮಾಡದಿರುವದು ಪಕ್ಷಪಾತ ಧೋರಣೆಯಾಗಿರುತ್ತದೆ ಎಂದು ವರದಿ ನೀಡಿರುವ ಕಾನೂನು ಸಲಹೆಗಾರ ಆರ್.ಕೆ.ನಾಗೇಂದ್ರ ಅವರು, ಇದರಲ್ಲಿ ಹಸ್ತಕ್ಷೇಪ ಮಾಡಿರುವವರ ಬಗ್ಗೆ ತನಿಖೆ ನಡೆಸಬೇಕು. ಪಂಚಾಯಿತಿಗೆ ಉಂಟಾಗಿರುವ ನಷ್ಟವನ್ನು ಭರಿಸುವ ಸಲುವಾಗಿ ದಾವೆಯನ್ನು ಹೂಡಬಹುದು. ನಕಲಿ ಬಾಡಿಗೆ ಕರಾರಿಗೆ ನಕಲಿ ಸಹಿ ಮಾಡಿರುವ ಬಗ್ಗೆ ಮತ್ತು ಪಂಚಾಯಿತಿ ಮೊಹರನ್ನು ದುರ್ಬಳಕೆ ಮಾಡಿರುವ ಹಿನೆÀ್ನಲೆಯಲ್ಲಿ ಪಂಚಾಯಿತಿ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಸಂಬಂಧಿಸಿದ ಆರೋಪಿಗಳ ಮೇಲೆ ಸಿವಿಲ್ ಮತ್ತು ಕ್ರಿಮಿನಲ್ ಕ್ರಮಗಳನ್ನು ಜರುಗಿಸುವಂತೆ ಕಾನೂನು ಪರಾಮರ್ಶನ ವರದಿಯಲ್ಲಿ ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕೂಡಲೆ ದೂರು ದಾಖಲಿಸಲು ಕ್ರಮಕೈಗೊಳ್ಳಲಾಗುವದು ಎಂದು ಪಪಂ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದ್ದಾರೆ.