ಗೋಣಿಕೊಪ್ಪ ವರದಿ, ಆ. 11 : ವಿಪರೀತ ಗಾಳಿ, ಮಳೆಗೆ ಕುರ್ಚಿ ಗ್ರಾಮದ ಕಾಫಿ ಬೆಳೆಗಾರ ಮಚ್ಚಮಾಡ ಕರುಂಬಯ್ಯ ಎಂಬವರಿಗೆ ಸೇರಿದ ಮನೆ ಕುಸಿದಿದೆ.

ಮನೆಯವರು ಮನೆಯ ಹೊರಗೆ ಇದ್ದ ಸಂದರ್ಭ ಘಟನೆ ಸಂಭವಿಸಿರುವದರಿಂದ ಜೀವಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಜೀವನ ಸಾಗಿಸುತ್ತಿದ್ದರು. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೆÉೀಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯಿಂದ ಮನೆ ಕಳೆದುಕೊಂಡಿರುವ ಬೆಳೆಗಾರ ತನ್ನ ತಂದೆಯ ಮನೆಯನ್ನು ಆಶ್ರಯಿಸಿದ್ದು, ಭಾರೀ ನಷ್ಟ ಉಂಟಾಗಿದೆ. ಮನೆಯ ಹೆಂಚುಗಳು, ಮರಮುಟ್ಟುಗಳು ಹಾಗೂ ಗೃಹ ಬಳಕೆ ವಸ್ತುಗಳು ನಾಶವಾಗಿವೆ.

ಬೆಳಿಗ್ಗೆ 11 ಗಂಟೆ ಸುಮಾರಿಗೆ ಮನೆ ಕುಸಿದಿದೆ. ಮನೆಯ ಮೇಲ್ಚಾವಣಿ ಮುರಿದು ನೆಲ ಕಚ್ಚಿದೆ. ಈ ಸಂದರ್ಭ ಮಕ್ಕಳು ಮನೆಯ ಹೊರಗೆ ಆಟವಾಡುತ್ತಿದ್ದರು. ಕರುಂಬಯ್ಯ ಹಾಗೂ ಅವರ ಪತ್ನಿ ಕೂಡ ಹೊರಗೆ ಕೆಲಸ ಮಾಡುತ್ತಿದ್ದ ಸಂದರ್ಭ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಿನವಿಡೀ ಸುರಿದ ಸೋನೆ ಮಳೆ

ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಸೋನೆ ಬಿಡದೆ ಸುರಿಯಿತು. ಆಷಾಢ ಮಾಸ ಮುಗಿದರೂ ಜೋರಾಗಿ ಬೀಸುವ ಗಾಳಿ, ಅಧಿಕ ಶೀತ, ಮೈ ನಡುಗಿಸುವ ಚಳಿಯ ತೀವ್ರತೆಗೆ ಜನತೆ ರೋಸಿ ಹೋಗಿದ್ದಾರೆ.

ವಾರದ ಸಂತೆ ದಿನವಾದ ಇಂದು ಸಂತೆ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಬಸ್ ತಂಗುದಾಣ, ರಸ್ತೆಗಳೂ ಬಿಕೋ ಎನ್ನುತ್ತಿದ್ದವು. ಸೂರ್ಯಗ್ರಹಣವೂ ಕಾರಣ ಇರಬಹುದು. ಮಾರುಕಟ್ಟೆ ಸಂಪೂರ್ಣ ಕೆಸರುಮಯವಾಗಿದ್ದು, ಜಾರುವ ಭಯದಿಂದ ಗ್ರಾಹಕರು ಹೆಜ್ಜೆಯಿಡುತ್ತಾ ಕೊಡೆ ಹಿಡಿದು ತರಕಾರಿ, ದಿನಸಿ ಸಾಮಾನು ಖರೀದಿಸುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು.

ಐಗೂರಿನಲ್ಲಿ ಮನೆಗಳು ಜಖಂ

ಸೋಮವಾರಪೇಟೆ: ನಿರಂತರ ಮಳೆಗೆ ವಾತಾವರಣ ಅತೀ ಶೀತಗೊಂಡಿದ್ದು, ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಯ ಛಾವಣಿ ಕುಸಿದು ವ್ಯಕ್ತಿಯೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಮತ್ತೊಂದು ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದೆ.

ಐಗೂರು ಗ್ರಾಮದ ಸರ್ಕಾರಿ ಶಾಲಾ ಮುಂಭಾಗ ವಾಸವಿರುವ ಲಕ್ಷ್ಮೀ ಅವರಿಗೆ ಸೇರಿದ ಮನೆಯ ಛಾವಣಿ ಇಂದು ನಸುಕಿನ ವೇಳೆ ಮುರಿದುಬಿದ್ದಿದ್ದು, ಅವರ ಪುತ್ರ ಪರಮೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಪರಮೇಶ್ ಅವರು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಇದರೊಂದಿಗೆ ಕಾಜೂರು ಗ್ರಾಮದ ಲಕ್ಷ್ಮೀ ಎಂಬವರ ವಾಸದ ಮನೆಯ ಗೋಡೆ ಅತೀ ಶೀತದಿಂದ ಕುಸಿದು ಬಿದ್ದಿದ್ದು, ನಷ್ಟ ಸಂಭವಿಸಿದೆ. ಸ್ಥಳಕ್ಕೆ ಐಗೂರು ಗ್ರಾ.ಪಂ. ಅಧ್ಯಕ್ಷ ಚಂಗಪ್ಪ, ಸದಸ್ಯೆ ಶೋಭ, ತಾ. ಪಂ. ಸದಸ್ಯೆ ಸಬಿತ ಚನ್ನಕೇಶವ, ಗ್ರಾಮ ಲೆಕ್ಕಾಧಿಕಾರಿ ಪ್ರಹ್ಲಾದ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.