ಮಡಿಕೇರಿ, ಆ. 11: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಇಂದು ಹಗಲಿಡೀ ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಿದೆ. ಕಳೆದ ರಾತ್ರಿಯಿಂದ ಬೆಳಗಿನ ತನಕ ಸಾಕಷ್ಟು ಮಳೆ ಸುರಿಯಿತಾದರೂ, ಹಗಲು ವೇಳೆ ದಟ್ಟ ಮೋಡದೊಂದಿಗೆ ಬಿಟ್ಟು ಬಿಟ್ಟು ಮಳೆ ಸುರಿಯಿತು. ಚಳಿಯೂ ಇತ್ತು. ಇಂದು ಕಕ್ಕಡದೊಂದಿಗೆ ಆಟಿಮಾಸದ ಅಮಾವಾಸ್ಯೆಯು ಇದ್ದ ಕಾರಣ ದೇವಾಲಯಗಳಲ್ಲಿ ವಿಶೇಷ ಪೂಜೆಯೂ ನೆರವೇರಿತು.
ಅನೇಕ ಮನೆಗಳಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಆಚರಣೆಗೊಂಡಿತು. ಭಾಗಮಂಡಲ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಪೊಲಿಂಕಾನ ಉತ್ಸವ ನೆರವೇರಿತು.
ಮಳೆ ವಿವರ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 1.30 ಇಂಚು ಮಳೆಯಾಗಿದೆ. ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಸರಾಸರಿ 111.78 ಇಂಚು ಮಳೆ ದಾಖಲಾಗಿದ್ದು, ಕಳೆದ ಸಾಲಿನಲ್ಲಿ ಇದೇ ಅವಧಿಗೆ 53 ಇಂಚು ದಾಖಲಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 2.56 ಇಂಚು ಮಳೆಯೊಂದಿಗೆ ಇದುವರೆಗೆ ಒಟ್ಟು 158.06 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 75.18 ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿಗೆ 0.31 ಇಂಚು ಮಳೆಯೊಂದಿಗೆ ಇದುವರೆಗೆ ಒಟ್ಟು 88.06 ಇಂಚು ಮಳೆಯಾಗಿದೆ. ಕಳೆದ ವರ್ಷ 42.86 ಇಂಚು ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿಗೆ 24 ಗಂಟೆಗಳಲ್ಲಿ 0.69 ಇಂಚು, ಇದುವರೆಗೆ ಒಟ್ಟು 89.21 ಇಂಚು ಹಾಗೂ ಕಳೆದ ಸಾಲಿನಲ್ಲಿ 40.75 ಇಂಚು ಮಳೆಯಾಗಿತ್ತು. ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 4 ಇಂಚು, ಭಾಗಮಂಡಲಕ್ಕೆ 3.60 ಇಂಚು, ಶಾಂತಳ್ಳಿ ವ್ಯಾಪ್ತಿಯಲ್ಲಿ 2 ಇಂಚು ಮಳೆಯಾಗಿದೆ.
ಅಲ್ಲಲ್ಲಿ ಮಳೆ: ಜಿಲ್ಲಾ ಕೇಂದ್ರ ಮಡಿಕೇರಿಗೆ 3 ಇಂಚು, ನಾಪೋಕ್ಲು 1.12 ಇಂಚು, ಸಂಪಾಜೆ 3.60 ಇಂಚು ಮಳೆ ದಾಖಲಾಗಿದೆ. ವೀರಾಜಪೇಟೆ 0.60 ಇಂಚು, ಹುದಿಕೇರಿ 0.39 ಇಂಚು, ಶ್ರೀಮಂಗಲ 0.14 ಇಂಚು, ಪೊನ್ನಂಪೇಟೆ 0.14 ಇಂಚು, ಅಮ್ಮತ್ತಿ 0.32 ಇಂಚು, ಬಾಳೆಲೆ 0.15 ಇಂಚು ಮಳೆಯಾಗಿದೆ. ಸೋಮವಾರಪೇಟೆ 0.65, ಶನಿವಾರಸಂತೆ 0.40, ಕೊಡ್ಲಿಪೇಟೆ 0.18, ಕುಶಾಲನಗರ 0.15, ಸುಂಟಿಕೊಪ್ಪ 1.10 ಇಂಚು ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಮುಂದುವರಿದ ಮಳೆ