ಮಡಿಕೇರಿ, ಆ. 11: ಕಾನೂರು-ಕೋಟೂರು ಮಹಿಳಾ ಸಮಾಜದಲ್ಲಿ ಇತ್ತೀಚೆಗೆ ಆಟಿ ಸಂಭ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ವತಿಯಿಂದ ಆರ್ಕಿಡ್ ಕೃಷಿ ಕುರಿತಾದ ತರಬೇತಿ ಸಹ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೂಟ್ಟೆಕ್ಮಾಡ ಮಾಯಮ್ಮ ಬೋಪಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅರಣ್ಯ ಮಹಾವಿದ್ಯಾಲಯದ ಯುವ ವಿಜ್ಞಾನ ಕಾವೇರಿ ದೇವಯ್ಯ ಆರ್ಕಿಡ್ ತಳಿಗಳು, ಕೃಷಿ ವಿಧಾನ, ಕೀಟ-ರೋಗ ನಿರ್ವಹಣೆ ಮತ್ತು ಮಾರುಕಟ್ಟೆಗಳಲ್ಲಿನ ಅವಕಾಶ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಧರಾದ ಡಾ. ಅರ್.ಎನ್ ಕೆಂಚರೆಡ್ಡಿ, ವಿಸ್ತರಣಾ ಶಿಕ್ಷಣ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸುತ್ತಾ ಕೃಷಿಯ ಜೊತೆಗೆ ಕೈಗೊಳ್ಳಬಹುದಾದ ಹಲವಾರು ಉಪಕಸುಬುಗಳ ಬಗ್ಗೆ ತರಬೇತಿ ಪ್ರಾತ್ಯಕ್ಷಿಕೆಗಳನ್ನು ಕೊಡಗಿನಾದ್ಯಂತ ಘಟಕದ ವತಿಯಿಂದ ನಡೆಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಆ ಮೂಲಕ ಮುಂಬರುವ 2022ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗಳಿಗೆ ಕೈಜೋಡಿಸಬೇಕೆಂದು ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಚೊಟ್ಟೆಕ್ಮಾಡ ಮಾಯಮ್ಮ, ಮಹಿಳಾ ಸಾಮಾಜವು ವರ್ಷದಲ್ಲಿ ಕನಿಷ್ಟ 4 ರಿಂದ 5 ಸಮಾರಂಭಗಳನ್ನು ಆಯೋಜಿಸಿ ಎಲ್ಲಾ ಸದಸ್ಯರಿಗೆ ವಿವಿಧ ವಿಚಾರವಾಗಿ ಮಾಹಿತಿ ಒದಗಿಸುವ ಕೆಲಸ ಮಾಡುತ್ತಿದೆ ಎಂದರು. ಚೆಪ್ಪುಡಿರ ಬಿಂದು ಪೂಣಚ್ಚ, ಕಾರ್ಯದರ್ಶಿ ನವೀನ್ ಮುತ್ತಪ್ಪ, ಜಂಟಿ ಕಾರ್ಯದರ್ಶಿ ಸುಳ್ಳಿಮಾಡ ಭವಾನಿ ಕಾರ್ಯಪ್ಪ, ಸದಸ್ಯರು ಹಾಜರಿದ್ದರು. ಆರ್ಕಿಡ್ ಕೃಷಿ ಕಾರ್ಯಕ್ರಮದ ನಂತರ ಕೊಡಗಿನ ಆಚಾರ ವಿಚಾರಗಳನ್ನು ಬಿಂಬಿಸುವ ನಾಟಕ, ದೇಶಭಕ್ತಿ ಕುರಿತು ರೂಪಕ ನೃತ್ಯಗಳನ್ನು ಮಹಿಳಾ ಸಮಾಜದ ಕಾವೇರಿ ಗುಂಪಿನ ಸದಸ್ಯೆಯರು ಪ್ರಸ್ತುತಪಡಿಸಿದರು.