ಮಡಿಕೇರಿ, ಆ. 11: ಇಂದು ಬೆಳಿಗ್ಗೆ ತೋಟದೊಳಗೆ ಕೆಲಸಕ್ಕೆ ತೆರಳಿದ ಕಾರ್ಮಿಕರೆಡೆಗೆ ಹಠಾತ್ ಧಾವಿಸಿದ ಒಂಟಿ ಸಲಗವೊಂದು ಮಹಿಳೆಯೊಬ್ಬರನ್ನು ಸೊಂಡಿಲಿನಿಂದ ಎತ್ತಿ ಎಸೆದು ತೆರಳಿರುವ ಭಯಾನಕ ಘಟನೆ ಸಂಭವಿಸಿದೆ. ಕೊಡಗರಹಳ್ಳಿಯ ಕೂರ್ಗಳ್ಳಿ ತೋಟದ ಕಾರ್ಮಿಕ ಮಹಿಳೆ ರಾಧಾ (55) ಎಂಬವರೇ ತೀವ್ರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಕಾರ್ಮಿಕರಾಗಿದ್ದಾರೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಎಂದಿನಂತೆ ತೋಟ ಕೆಲಸಕ್ಕೆ ತೆರಳಿದ ರಾಧಾ ಅವರಿಗೆ ಎದುರುಗೊಂಡ ಸಲಗ ಎಸೆದಿರುವ ಪರಿಣಾಮ ಎಡಗೈ ಮೂಳೆ ಮುರಿದಿದ್ದು, ತೀವ್ರ ಘಾಸಿಗೊಂಡಿದ್ದಾರೆ. ಕೂಡಲೇ ಇತರ ಕಾರ್ಮಿಕರ ನೆರವಿನಿಂದ ಆಕೆಯನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಷಯ ತಿಳಿದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಡಿಎಫ್‍ಓ ಎಂ.ಎಂ. ಜಯ, ಎಸಿಎಫ್ ಎಂ.ಎಸ್. ಚಿಣ್ಣಪ್ಪ, ಉಪವಲಯ ಅರಣ್ಯಾಧಿಕಾರಿಗಳಾದ ರಂಜನ್, ಅರುಣ್ ಕುಮಾರ್ ಮೊದಲಾದವರು ಭೇಟಿ ನೀಡಿ ಘಾಸಿಗೊಂಡಿರುವ ಮಹಿಳೆಯ ಆರೋಗ್ಯ ವಿಚಾರಿಸಿದರು. ಆಕೆಗೆ ಸೂಕ್ತ ಚಿಕಿತ್ಸೆಯೊಂದಿಗೆ ನೆರವು ಕಲ್ಪಿಸುವಂತೆ ಸುನಿಲ್ ಸುಬ್ರಮಣಿ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕರೊಂದಿಗೆ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ, ದೇಶಪ್ರೇಮಿ ಯುವಕ ಸಂಘದ ಅರುಣ್ ಶೆಟ್ಟಿ ಮೊದಲಾದವರು ಹಾಜರಿದ್ದರು.