ಕುಶಾಲನಗರ, ಆ. 11: ಕುಶಾಲನಗರ ಪಟ್ಟಣದ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ರೀತಿಯ ಯೋಜನೆಯೊಂದನ್ನು 3 ಕೋಟಿ 75 ಲಕ್ಷ ರೂ.ಗಳ ವೆಚ್ಚದಲ್ಲಿ ರೂಪಿಸಲಾಗುತ್ತಿದೆ. ದಿನನಿತ್ಯ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಉತ್ಪಾದನೆಯಾಗುತ್ತಿರುವ ಮಾನವ ನಿರ್ಮಿತ ತ್ಯಾಜ್ಯ ಸಾಗಿಸಿ ನಂತರ ಬೇರ್ಪಡಿಸಿ ಗೊಬ್ಬರ ತಯಾರಿಸುವ ಯೋಜನೆ ಇದಾಗಿದ್ದು ಈಗಾಗಲೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.
ಪಟ್ಟಣದಿಂದ ದೈನಂದಿನ 7 ರಿಂದ 10 ಟನ್‍ಗಳಷ್ಟು ಪ್ರಮಾಣದ ತ್ಯಾಜ್ಯವನ್ನು ಕಸ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತಿದ್ದು ಇದುವರೆಗೆ ಅದನ್ನು ಸಂಸ್ಕರಣೆ ಮಾಡಲು ಪಂಚಾಯಿತಿ ಹರ ಸಾಹಸ ಪಡುತ್ತಿತ್ತು. ಈ ನಿಟ್ಟಿನಲ್ಲಿ ಕೂಡಿಗೆ ಪಂಚಾಯಿತಿ ವ್ಯಾಪ್ತಿಯ ಭುವನಗಿರಿಯಲ್ಲಿ ಕಳೆದ ಕೆಲವು ವರ್ಷಗಳಿಂದ ನಿರ್ಮಿಸಲಾ ಗಿರುವ ಅಂದಾಜು 7.15 ಎಕರೆ ವಿಸ್ತೀರ್ಣದ ಕಸ ವಿಲೇವಾರಿ ಘಟಕದಲ್ಲಿ ಈಗಾಗಲೆ ಆವರಣ ಗೋಡೆ, ಕೊಳವೆ ಬಾವಿ ನಿರ್ಮಾಣ, ಕಾಂಕ್ರಿಟ್ ರಸ್ತೆ ಮತ್ತು ಶೆಡ್‍ಗಳನ್ನು ನಿರ್ಮಿಸಲಾಗಿದ್ದು ಅತ್ಯಾಧುನಿಕ ತಂತ್ರಜ್ಞಾನಗಳ ಯಂತ್ರೋಪ ಕರಣಗಳನ್ನು ಅಳವಡಿಸುವ ಯೋಜನೆಗೆ ಕ್ರಮಕೈಗೊಳ್ಳಲಾಗಿದೆ.
2017-18 ರಲ್ಲಿ ಈ ಕಸ ವಿಲೇವಾರಿ ಘಟಕಕ್ಕೆ 20 ಲಕ್ಷ ವೆಚ್ಚ ಮಾಡಲಾಗಿದ್ದು ಒಟ್ಟು 30 ಲಕ್ಷ ರೂ.ಗಳನ್ನು ಈಗಾಗಲೆ ವ್ಯಯಿಸಲಾಗಿದೆ. ಈ ಸಾಲಿನಲ್ಲಿ ರೂ. 30 ಲಕ್ಷ ಅನುದಾನ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಬಳಸಲಾಗುತ್ತದೆ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ.
ವಿದ್ಯುತ್ ವ್ಯವಸ್ಥೆ. ಪ್ಲಾಟ್‍ಫಾರಂ ಅಳವಡಿಕೆ, ವೇಯಿಂಗ್ ಬ್ರಿಡ್ಜ್ ಮತ್ತು ಸಿಸಿ ಕ್ಯಾಮೆರ ಅಳವಡಿಸುವದ ರೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಕಸ ವಿಲೇವಾರಿ ನಡೆಯಲಿದೆ ಎಂದಿದ್ದಾರೆ. ಕಸವನ್ನು ವಿಂಗಡಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವದು ನಂತರ ಇಲ್ಲಿ ಉತ್ಪಾದನೆಯಾಗಲಿರುವ ಕಾಂಪೊಸ್ಟ್ ಗೊಬ್ಬರವನ್ನು ಮಾರಾಟ ಮಾಡಲಾಗುವದು. ಯೋಜನೆ ಪೂರ್ಣಗೊಂಡ ನಂತರ ಕೂಡಿಗೆ ಮತ್ತು ಮುಳ್ಳುಸೋಗೆ ಗ್ರಾ.ಪಂ.ನಲ್ಲಿ ಉತ್ಪಾದನೆಯಾಗುವ ಕಸವನ್ನು ಇದೇ ಘಟಕಕ್ಕೆ ವಿಲೇವಾರಿ ಮಾಡಲು ಚಿಂತನೆ ಹರಿಸಲಾಗಿದೆ ಎಂದಿದ್ದಾರೆ.
ಪ್ರಸಕ್ತ ಕಸವನ್ನು ಗುಂಡಿ ತೆಗೆದು ಅದರಲ್ಲಿ ಹಾಕಲಾಗುತ್ತಿದ್ದು ನಂತರ ಅದನ್ನು ವಿಲೇವಾರಿ ಮಾಡುವ ಕೆಲಸ ನಡೆಯುತ್ತದೆ. ಕಸ ವಿಲೇವಾರಿ ಘಟಕದ ಆವರಣ ಎರಡು ಪ್ರತ್ಯೇಕ ಭಾಗದಲ್ಲಿದ್ದು ಗಿಡಮರಗಳನ್ನು ನೆಟ್ಟು ನಿರ್ವಹಣೆ ಮಾಡಲಾಗುತ್ತಿದೆ. ಆವರಣದ ರಕ್ಷಣೆಗಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ಓರ್ವ ಪೌರಕಾರ್ಮಿಕನನ್ನು ನಿಯೋಜಿಸಿದೆ. ಸಿಬ್ಬಂದಿಗಳಿಗಾಗಿ ಘಟಕದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಪ್ರತ್ಯೇಕ ಕಟ್ಟಡ ಕೂಡ ನಿರ್ಮಿಸಿದ್ದಾರೆ.