ಮಡಿಕೇರಿ, ಆ. 10: ಕೊಡಗು ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಮಳೆಯ ತೀವ್ರತೆ ನಡುವೆಯೂ ಶೇ.50ರಷ್ಟು ಸಾಧನೆಯೊಂದಿಗೆ, ನಾಟಿ ಕೆಲಸ ಇನ್ನೂ ಮುಂದುವರೆದಿದೆ. ಕಳೆದ ಒಂದು ವಾರದಿಂದ ಕೆಲವೆಡೆ ಭತ್ತದ ನಾಟಿ ಗದ್ದೆಗಳಲ್ಲಿ ನೀರು ಹೆಚ್ಚಳದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಸಸಿಮಡಿ ಕೊಚ್ಚಿ ಹೋಗಿರುವ ಪ್ರದೇಶಗಳಲ್ಲಿ ಮರು ಬಿತ್ತನೆಯೊಂದಿಗೆ ನಾಟಿಗಾಗಿ ರೈತ ಕಾಯುತ್ತಿದ್ದಾನೆ.ಪ್ರಸಕ್ತ ಜಿಲ್ಲೆಯಲ್ಲಿ 34500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿಯ ಗುರಿ ಹೊಂದಲಾಗಿದೆ. ಕೃಷಿ ಇಲಾಖೆಯ ಮೂಲಗಳ ಪ್ರಕಾರ ವಾರಗಳ ಹಿಂದೆ ಶೇ. 41.94ರಷ್ಟು ನಾಟಿ ಮುಗಿದಿತ್ತು. ಈ ಒಂದು ವಾರದ ಅವಧಿಯಲ್ಲಿ ಮಳೆಯಿಂದಾಗಿ ಶೇ.9ರಷ್ಟು ಪ್ರದೇಶಗಳಲ್ಲಿ ನಾಟಿಯೊಂದಿಗೆ ಶೇ.50ರಷ್ಟು ಒಟ್ಟು ಸಾಧನೆಯಾಗಿದೆ.ಮಡಿಕೇರಿ ತಾಲೂಕಿನಲ್ಲಿ 6500 ಹೆಕ್ಟೇರ್ ಗದ್ದೆಯ ಪೈಕಿ 2200 ಹೆಕ್ಟೇರ್ನಷ್ಟು ನಾಟಿಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಭತ್ತದ ಗದ್ದೆಗಳ ಪೈಕಿ 2500 ಹೆಕ್ಟೇರ್ ಹಾಗೂ ವೀರಾಜಪೇಟೆ ತಾಲೂಕಿನ 14 ಸಾವಿರ ಹೆಕ್ಟೇರ್ ಭೂಮಿಯಲ್ಲಿ 9 ಸಾವಿರ ಹೆಕ್ಟೇರ್ನಷ್ಟು ಪ್ರಗತಿ ಗೋಚರಿಸಿದೆ. ಅಲ್ಲದೆ ಸುಮಾರು 2 ಸಾವಿರ ಹೆಕ್ಟೇರ್ ಮುಸುಕಿನ ಜೋಳ ಕೃಷಿ ಮಾಡಲಾಗಿದೆ.
ದಕ್ಷಿಣ ಕೊಡಗಿನಲ್ಲಿ ನಾಟಿಗೆ ಅನುಕೂಲ ವಾತಾವರಣವಿದ್ದು, ಉತ್ತರ ಕೊಡಗಿನ ಪುಷ್ಪಗಿರಿ ತಪ್ಪಲು ಪ್ರದೇಶದ ಬಹಳಷ್ಟು ಗ್ರಾಮಗಳಲ್ಲಿ ಕೃಷಿಗೆ ತೀವ್ರ ಹೊಡೆತ ಉಂಟಾಗಿ ಮಳೆಯಿಂದ ಪೈರು ನಾಶಗೊಂಡಿರುವ ವರದಿಗಳು ಲಭಿಸಿವೆ.
ನೆಲಕಚ್ಚಿದ ಕಾಫಿ : ಶಾಂತಳ್ಳಿಯ ಬೆಳೆಗಾರ ಕುಶಾಲಪ್ಪ ಪರಿಸ್ಥಿತಿ ವಿವರಿಸುತ್ತಾ, ಕಾಫಿ ಫಸಲು ಸಂಪೂರ್ಣ ಉದುರಿಹೋಗಿದ್ದು, ಬೆಳೆಗಾರರ ದುಡಿಮೆಯೆಲ್ಲ ಮಳೆಯಿಂದ ಮಣ್ಣು ಪಾಲಾಗಿದೆ. ಕಾರ್ಮಿಕರ ಕೂಲಿ ದುಪ್ಪಟ್ಟು ಆಗಿದ್ದು, ಗೊಬ್ಬರ ಇತ್ಯಾದಿ ಹಾಕಿ ಸಲಹಿದ ತೋಟ ಸಂಪೂರ್ಣ ಹಾನಿಗೀಡಾಗಿದೆ. ಈ ಭಾಗದ ಜನತೆಯ
(ಮೊದಲ ಪುಟದಿಂದ) ಬದುಕಿಗೆ ದಿಕ್ಕೇ ತೋಚದಂತಹ ಶೋಚನೀಯ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಂಡರಿಯದ ಹಾನಿ: ಗ್ರಾಮೀಣ ಹಿರಿಯರ ಪ್ರಕಾರ 1962ರ ಸುಮಾರಿಗೆ ಇಷ್ಟೊಂದು ಮಳೆ ಹಾಗೂ ಕೃಷಿ ಭೂಮಿಯಲ್ಲಿ ಪೈರು ಹಾಳಾಗಿತ್ತಂತೆ. ಆ ಬಳಿಕ ಇಂತಹ ಅನುಭವ ಅರಿವಿಗೆ ಬಂದಿಲ್ಲವೆಂದು ಅನುಭವ ಹಂಚಿಕೊಂಡಿದ್ದಾರೆ. ಈ ಗ್ರಾಮೀಣ ಪ್ರದೇಶದಲ್ಲಿ ಕಳೆದ ಆರೆಂಟು ವರ್ಷಗಳಿಂದ ಮಳೆ ಕಡಿಮೆಯಾಗಿರುವ ಆಶಯದಿಂದ ಅನೇಕರು ಕಾಫಿ ತೋಟಗಳನ್ನು ಮಾಡಿದ್ದಾರೆ.
ತಮ್ಮ ಪೂರ್ವಜರು ರೂಢಿಸಿಕೊಂಡು ಬಂದಿದ್ದ ಏಲಕ್ಕಿ ಹಾಗೂ ಸೊಪ್ಪು, ತರಕಾರಿ, ಭತ್ತದ ಜತೆಯಲ್ಲಿ ಕಷ್ಟಪಟ್ಟು ಕಾಫಿ ತೋಟ ಆರಂಭಿಸಿದ್ದು, ಪ್ರಸಕ್ತ ಮಳೆಯಿಂದ ಸಂಪೂರ್ಣ ಹಾನಿಯಾಗಿದೆ ಎಂದು ನೋವು ವ್ಯಕ್ತಪಡಿಸಿದ್ದಾರೆ.
ಮುಳುವಾದ ಅವಿಭಕ್ತ ಕುಟುಂಬ: ಕೌಟುಂಬಿಕ ಜೀವನದಲ್ಲಿ ಕುಟುಂಬದ ಹಿರಿಯ ಪಟ್ಟೇದಾರನ ಹೆಸರಿನಲ್ಲಿ ತೋಟದ ಜಾಗಕ್ಕೆ ಸಂಬಂಧಿಸಿದ ಆರ್ಟಿಸಿಯಿದ್ದು, ಆಸ್ತಿ ವಿಂಗಡಣೆಯಾಗದಿರುವ ಪರಿಣಾಮ ತಮಗೆ ಉಂಟಾಗಿರುವ ನಷ್ಟಕ್ಕೆ ಪರಿಹಾರ ಲಭಿಸುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.
ಖುದ್ದು ಪರಿಶೀಲಿಸಲಿ: ಕೊಡಗು ಜಿಲ್ಲಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ಗ್ರಾಮೀಣ ಭಾಗದ ಅತಿವೃಷ್ಟಿ ಬಗ್ಗೆ ಖುದ್ದಾಗಿ ಪರಿಶೀಲಿಸಿ ಮಾನವೀಯ ನೆಲೆಯಲ್ಲಿ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ನೊಂದ ಜನತೆ ‘ಶಕ್ತಿ’ ಮೂಲಕ ಒತ್ತಾಯಿಸಿ ಹೇಳಿಕೆ ನೀಡಿದ್ದಾರೆ.
ಸೂರ್ಯ ಕಾಣಲಿಲ್ಲ...!: ಶುಕ್ರವಾರದ ಸಂತೆಗೆ ಆಗಮಿಸಿದ್ದ ಗ್ರಾಮೀಣ ರೈತರು ಮಳೆಯ ತೀವ್ರತೆ ನಡುವೆ ತಮ್ಮ ಸಂಕಷ್ಟ ತೋಡಿಕೊಂಡರು. ಕಳೆದ ಒಂದೂವರೆ ತಿಂಗಳಿನಿಂದ ಸೂರ್ಯನನ್ನು ಕಾಣದಷ್ಟು ನಿರಂತರ ಮೋಡ ಮುಸುಕಿದ ವಾತಾವರಣದಿಂದ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ನಾಟಿ ಸಂಪೂರ್ಣ ಕೊಳೆತು ಹೋಗಿ ಗದ್ದೆಗಳು ಕೇವಲ ಹಸಿರು ಸಿರಿ ಮಾಯವಾಗಿ ಕೆಸರಿನ ಬಯಲಿನಂತೆ ಗೋಚರಿಸುತ್ತಿದೆ ಎಂದು ನೋವು ತೋಡಿಕೊಂಡರು.
ಆಶ್ಲೇಷ ಆರ್ಭಟಕ್ಕೆ ಮುಳುಗಿದ ದೇವಾಲಯ
ಬುಧವಾರ ರಾತ್ರಿ ಸುರಿದ ಭಾರೀ ಮಳೆ ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದಲ್ಲಿ ದಶಕಗಳ ಹಿಂದಿನ ದಾಖಲೆಯನ್ನು ಮೀರಿದ್ದು, 24 ಗಂಟೆಗಳಲ್ಲಿ 9.5 ಇಂಚು ಮಳೆಯಾಗಿದೆ. ಮದ್ಯರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು ಗ್ರಾಮದ ಶ್ರೀ ಭಧ್ರಕಾಳೇಶ್ವರಿ ದೇವಾಲಯವು ಮುಳುಗಡೆಗೊಂಡಿದೆ. ದೇವಾಲಯದ ಒಳಾಂಗಣದಲ್ಲಿ ಸುಮಾರು ಹತ್ತು ಅಡಿಗಳಷ್ಟು ನೀರು ತುಂಬಿದೆ. ಇಲ್ಲಿನ ಈಶ್ವರ ಹಾಗೂ ಗಣಪತಿ ಗುಡಿಗಳು ಸಂಪೂರ್ಣ ಮುಳುಗಿದ್ದು ವಿಗ್ರಹಗಳಿಗೆ ನದಿ ನೀರಿನ ಅಭಿಷೇಕವಾಗಿದೆ. ಮುಂಜಾನೆಯಿಂದ ಮಳೆ ಸ್ವಲ್ಪ ಕಡಿಮೆಯಾದ್ದರಿಂದ ನೀರಿನ ಪ್ರಮಾಣ ಸ್ವಲ್ಪ ಇಳಿಮುಖವಾಗಿದೆ. ರಸ್ತೆ, ಸೇತುವೆ ಹಾಗೂ ಭತ್ತದ ಗದ್ದೆಗಳು ನದಿ ನೀರಿನಿಂದ ಮುಳುಗಿದ್ದು ದಶಕಗಳ ಹಿಂದಿನ ದಾಖಲೆಯನ್ನೂ ಮೀರಿಸಿದೆ. ಈ ವರ್ಷದಲ್ಲಿ ಸರಾಸರಿ 165 ಇಂಚು ಮಳೆ ದಾಖಲಾಗಿದೆ.
ಹಲವೆಡೆ ಬರೆ ಕುಸಿದಿದ್ದು ಕೆಲವು ಮನೆಗಳಿಗೆ ಹಾನಿಯಾಗಿದೆ. ನದಿ ತೀರದಲ್ಲಿನ ಕಾಫಿ ತೋಟ, ಭತ್ತದ ಗದ್ದೆಗಳು ತೊಯ್ದು ಹೋಗಿವೆ. ತಾ.9ರ ರಾತ್ರಿ ಸುರಿದ ದಾಖಲೆ ಮಳೆ ಮುಂಜಾನೆ ವೇಳೆಗೆ ಗ್ರಾಮದಲ್ಲಿ ಅವಾಂತರ ಸೃಷ್ಟಿಸಿತ್ತು ಎಂದು ಗ್ರಾಮಸ್ಥ ಮಧು ಮಾನಡ್ಕ ‘ಶಕ್ತಿ’ಗೆ ತಿಳಿಸಿದ್ದಾರೆ.
ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಚಂಗೇಟಿರ ಶೃತಿ ಮತ್ತು ಪಲ್ಲವಿ ಅವರ ಮನೆಯ ಗೋಡೆ ಕುಸಿದಿದ್ದು, ಮನೆಯ ಒಂದು ಭಾಗ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮಲೆಕ್ಕಿಗರು ತೆರಳಿ ಪರಿಶೀಲನೆ ನಡೆಸಿದರು.