ತಿರುವನಂತಪುರಂ, ಆ. 10: ದೇವರನಾಡು ಕೇರಳದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈ ವರೆಗೂ ಸಾವನ್ನಪ್ಪಿರುವವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಸಚಿವ ಕೆ.ಜೆ. ಅಲ್ಫಾನ್ಸೋ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೇರಳದ ವಿವಿಧೆಡೆ ಸಂಭವಿಸಿದ ಮಳೆ ಸಂಬಂಧಿತ ಪ್ರಕರಣಗಳಲ್ಲಿ ಈವರೆಗೂ ಸಾವನ್ನಪ್ಪಿರುವವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಇಡುಕ್ಕಿ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು, ಭೂಕುಸಿತ, ಪ್ರವಾಹದಲ್ಲಿ ಕೊಚ್ಚಿ ಹೋಗುವಿಕೆ. ಗೋಡೆ ಕುಸಿತದಂತಹ ವಿವಿಧ ಪ್ರಕರಣಗಳಲ್ಲಿ ಇಲ್ಲಿ ಒಟ್ಟು 11 ಮಂದಿ ಸಾವಿಗೀಡಾಗಿದ್ದಾರೆ. ಇನ್ನು ಭಾರೀ ಮಳೆ ತತ್ತರಿಸಿರುವ ಕೇರಳದ ವಿವಿಧ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಕಲ್ಲಿಕೋಟೆ, ವಯನಾಡ್, ಪಾಲಕ್ಕಾಡ್, ಇಡುಕ್ಕಿ, ಮಲಪ್ಪುರಂ ಮತ್ತು ಕೊಲ್ಲಂ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂತೆಯೇ ಇಲ್ಲಿನ ಖ್ಯಾತ ನೆಹರೂ ಬೋಟ್ ರೇಸ್ ಅನ್ನು ಕೂಡ ಮುಂಜಾಗ್ರತಾ ಕ್ರಮವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಇನ್ನು ಕೇರಳದಲ್ಲಿ ಮುಂಗಾರು ಮಳೆಗೆ ಜನತೆ ತತ್ತರಿಸಿ ಹೋಗಿದ್ದು, ಕಳೆದೆರಡು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ಇಡುಕ್ಕಿ ಜಿಲ್ಲೆಯೊಂದರಲ್ಲೇ ಅತೀ ಹೆಚ್ಚು ಅಂದರೆ ಕಳೆದೆರಡು ದಿನಗಳಲ್ಲಿ 128.6 ಮಿ.ಮೀ. ಮತ್ತು 124 ಮಿ.ಮೀ. ಮಳೆಯಾಗಿದ್ದು, ತೋಡುಪುಳಾ ಮತ್ತು ಮುನ್ನಾರ್‍ನಲ್ಲಿ 107.3 ಮತ್ತು 54.2 ಮಿ.ಮೀ. ಮಳೆಯಾಗಿದೆ. ಪರಿಣಾಮ ಕೇರಳದ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೇರಳದಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ತಲೆದೋರಿದೆ.
ಕೇರಳಕ್ಕೆ ಕರ್ನಾಟಕದ ಸಹಾಯ ಹಸ್ತ
ಬೆಂಗಳೂರು, ಆ. 10: ಕಳೆದ ಎರಡು ದಿನಗಳಿಂದ ಕೇರಳದ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದೇವರ ನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನೆರೆ ರಾಜ್ಯದ ನೆರವಿಗೆ ಧಾವಿಸಿದ ಕರ್ನಾಟಕ ಸರ್ಕಾರ, ವೈದ್ಯರ ತಂಡ ಹಾಗೂ ರೂ. 10 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಮುಂದಾಗಿದೆ. ಪ್ರವಾಹದಿಂದಾಗಿ ಕೇರಳದಲ್ಲಿ ಇದುವರೆಗೆ 27 ಮಂದಿ ಮೃತಪಟ್ಟಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಕೇರಳಕ್ಕೆ ವೈದ್ಯರ ತಂಡ ಹಾಗೂ ರೂ. 10 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ರವಾನೆ ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅವರಿಗೆ ಸೂಚಿಸಿದ್ದಾರೆ. ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯ ನೆರವು ನೀಡುವ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರಿಗೆ ಕರೆ ಮಾಡಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಅಗತ್ಯವಿರುವ ಎಲ್ಲಾ ನೆರವು ನೀಡುವದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಕಬಿನಿಯ ಹಿನ್ನೀರಿನಿಂದ ಪ್ರವಾಹ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂಬ ಕೇರಳ ಸರ್ಕಾರದ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಕಬಿನಿ ಜಲಾಶಯದಿಂದ 75 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
24 ಡ್ಯಾಂಗÀಳಿಂದ ನೀರು ಹೊರಕ್ಕೆ
ತಿರುವನಂತಪುರಂ, ಆ. 10: ಕೇರಳದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಮಳೆ ಸುರಿಯುತ್ತಿದ್ದು, ದೇವರನಾಡಲ್ಲಿ ಭಾರೀ ಅನಾಹುತವನ್ನೇ ಸೃಷ್ಟಿ ಮಾಡಿದೆ. ಕೇರಳದಾದ್ಯಂತ ವರುಣನ ಅಬ್ಬರ ಮುಂದುವರೆದಿದ್ದು, ರಾಜ್ಯದ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಂತೆಯೇ ವಿವಿಧ ಜಲಾಶಯಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ಬಹುತೇಕ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಇದೇ ಕಾರಣಕ್ಕೆ ಇಡುಕ್ಕಿ, ಚೆರುಥೋಣಿ, ಮುಲ್ಲಾ ಪೆರಿಯಾರ್, ಮಲಂಪುಂಜಾ, ತೆನ್ಮಾಲಾ ಡ್ಯಾಂ ಸೇರಿದಂತೆ ಕೇರಳದ ಎಲ್ಲ 24 ಡ್ಯಾಂಗಳ ಗೇಟ್‍ಗಳನ್ನು ತೆರೆದು ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಪರಿಣಾಮ ಡ್ಯಾಂ ನದಿ ಪಾತ್ರದ ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದೆ. ಬರೊಬ್ಬರಿ 26 ವರ್ಷಗಳ ಬಳಿಕ ಇಡುಕ್ಕಿ ಡ್ಯಾಂನ ಒಟ್ಟು ಐದು ಗೇಟ್‍ಗಳ ಪೈಕಿ ನಾಲ್ಕು ಗೇಟ್‍ಗಳನ್ನು ತೆರೆದು ನೀರು ಬಿಡಲಾಗುತ್ತಿದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಚೆರುಥೋಣಿ ಡ್ಯಾಂನಿಂದಲೂ ನೀರನ್ನು ಹೊರಹಾಕಲಾಗುತ್ತಿದೆ. ರಾಜ್ಯದ ಒಟ್ಟಾರೆ ಜಲಾಶಯಗಳಲ್ಲಿ ಪ್ರಸ್ತುತ ಸುಮಾರು 97.61 ರಷ್ಟು ನೀರು ಭರ್ತಿಯಾಗಿದ್ದು, ಜಲಾಶಯಗಳಲ್ಲಿ ಭಾರೀ ಪ್ರಮಾಣದ ಒಳಹರಿವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ಕೇರಳದಲ್ಲಿ ಈವರೆಗೂ ಸುಮಾರು 27 ಮಂದಿ ಸಾವನ್ನಪ್ಪಿದ್ದಾರೆ. ಕಳೆದೆರಡು ದಿನಗಳಿಂದ ಇಡುಕ್ಕಿಯಲ್ಲಿ 129.80 ಮಿಮೀ ಮಳೆಯಾಗಿದ್ದು, ಕೇರಳದಲ್ಲಿ ಅತೀ ಹೆಚ್ಚು ಮಳೆಹಾನಿಗೀಡಾದ ಜಿಲ್ಲೆ ಕೂಡ ಇಡುಕ್ಕಿಯಾಗಿದೆ. ಇಡುಕ್ಕಿಯಲ್ಲಿ ಈವರೆಗೂ ಒಟ್ಟು 11 ಮಂದಿ ಸಾವಿಗೀಡಾಗಿದ್ದು, ನೂರಾರು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಹತ್ತಾರು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದೆ.
ಎಸ್‍ಬಿಐಗೆ ರೂ. 4876 ಕೋಟಿ ನಷ್ಟ
ಮುಂಬೈ, ಆ. 10: ಭಾರತದ ಅತಿ ದೊಡ್ಡ ಬ್ಯಾಂಕ್‍ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಶುಕ್ರವಾರ ತನ್ನ ಮೊದಲ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ್ದು ನಿರೀಕ್ಷೆ ಮೀರಿ ನಷ್ಟವಾಗಿರುವದಾಗಿ ಹೇಳಿಕೊಂಡಿದೆ. ಈ ಸಾಲಿನಲ್ಲಿ ಬ್ಯಾಂಕ್‍ಗೆ ರೂ. 4876 ಕೋಟಿ ನಷ್ಟ ಅನುಭವಿಸಿದೆ. ಜೂನ್ 30 ರವರೆಗಿನ ಮೂರು ತಿಂಗಳ ಅವಧಿಯಲ್ಲಿ ಬ್ಯಾಂಕ್ ಈ ಪ್ರಮಾಣದ ನಷ್ಟ ಅನುಭವಿಸಿದೆ. ಇದೇ ವೇಳೆ ಕಳೆದ ಆರ್ಥಿಕ ವರ್ಷದ ಈ ಸಮಯದಲ್ಲಿ ಬ್ಯಾಂಕ್ ರೂ. 2006 ಕೋಟಿ ಲಾಭಗಳಿಸಿತ್ತು.ಆದರೆ ಕಳೆದ ಆರ್ಥಿಕ ವರ್ಷದ ಕಡೆಯ ತ್ರೈಮಾಸಿಕದಲ್ಲಿ ಬ್ಯಾಂಕ್ ರೂ. 7718 ಕೋಟಿ ನಷ್ಟ ಅನುಭವಿಸಿತ್ತು. ವಸೂಲಾಗದ ಸಾಲ ಹಾಗೂ ಭವಿಷ್ಯದ ನಷ್ಟವನ್ನು ಸರಿದೂಗಿಸಲು ಮುಂಗಡವಾಗಿ ತೆಗೆದಿರಿಸಿದ ಹಣದ ಕಾರಣಗಳಿಂದ ಈ ಪ್ರಮಾಣದ ನಷ್ಟವಾಗಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ವಸೂಲಾಗದ ಸಾಲದ ಮೊತ್ತವು ರೂ. 188 ಕೋಟಿಯಿಂದ ರೂ. 213 ಕೋಟಿಗೆ ಏರಿಕಾತ್ಯಾಗಿದ್ದರೆ ಇದರ ನಿವ್ವಳಾಂಶವು ರೂ. 107 ಕೋಟಿಯಿಂದ ರೂ. 99.26 ಕೋಟಿಗೆ ಇಳಿಕೆ ಆಗಿದೆ.
ಮೈಸೂರು-ಊಟಿ ರಸ್ತೆ ಸಂಚಾರ ಸ್ಥಗಿತ
ಮೈಸೂರು, ಆ. 10: ಕಬಿನಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಪಿಲಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಮೈಸೂರು-ಊಟಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ನಂಜನಗೂಡು ತಾಲೂಕಿನಲ್ಲಿರುವ ಸುತ್ತೂರು ಗ್ರಾಮದ ಸೇತುವೆ ಮುಳುಗಡೆಯಾಗಿದ್ದು ಸೇತುವೆ ಮೇಲೆ ನೀರು ಹರಿಯುತ್ತಿದೆ. ವೈನಾಡ್ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನೀರಿನ ಹರಿವು ಅಪಾರ ಪ್ರಮಾಣದಲ್ಲಿ ಏರಿಕೆಯಾಗಿದೆ.