ಸೋಮವಾರಪೇಟೆ, ಆ. 10: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿಯುವ ಸಂಬಂಧ ಜೆಡಿಎಸ್ ಹಾಗೂ ಕಾಂಗ್ರೆಸ್ ವಾರ್ಡ್‍ಗಳನ್ನು ಹಂಚಿಕೆ ಮಾಡಿಕೊಂಡಿದೆ.

11 ವಾರ್ಡ್‍ಗಳಿರುವ ಪ.ಪಂ.ನಲ್ಲಿ ಎರಡೂ ಪಕ್ಷಗಳು ತಲಾ 5 ವಾರ್ಡ್‍ಗಳಲ್ಲಿ ಸ್ಪರ್ಧಿಸಲು ಮಾತುಕತೆ ನಡೆಸಿದ್ದು, ಉಳಿದ 1 ವಾರ್ಡ್‍ನಲ್ಲಿ ಕಾಂಗ್ರೆಸ್ ಸ್ಪರ್ಧಿಸುವ ಸಂಭವವಿದೆ. ವಾರ್ಡ್ 1ನ್ನು ಹಾಗೆಯೇ ಇಟ್ಟುಕೊಂಡಿರುವ ಎರಡೂ ಪಕ್ಷಗಳು, ಸೂಕ್ತ ಅಭ್ಯರ್ಥಿಯ ತಲಾಶೆಯಲ್ಲಿದೆ. ವಾರ್ಡ್ 2 ಬಾಣಾವರ ರಸ್ತೆಯಿಂದ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ್, ಬಿಜೆಪಿ ಅಭ್ಯರ್ಥಿಯಾಗಿ ಪಿ.ಕೆ. ಚಂದ್ರು ಸ್ಪರ್ಧಿಸುವದು ಬಹುತೇಕ ಖಚಿತವಾಗಿದೆ.

ವಾರ್ಡ್ 3 ವೆಂಕಟೇಶ್ವರ ಬ್ಲಾಕ್‍ನಿಂದ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿಯಾಗಿ ಪುಷ್ಪ, ಬಿಜೆಪಿಯಿಂದ ನಳಿನಿ ಗಣೇಶ್, ವಾರ್ಡ್ 4ರಲ್ಲಿ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎ. ಆದಂ ಸ್ಪರ್ಧಿಸುವದು ಖಚಿತವಾಗಿದೆ. ಬಿಜೆಪಿಯಿಂದ ಮೂರ್ತಿ ಮತ್ತು ಅಜಯ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ವಾರ್ಡ್ 5 ದೇವಸ್ಥಾನ ರಸ್ತೆಯಿಂದ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಸಿ. ವೆಂಕಟೇಶ್ ಸ್ಪರ್ಧಿಸುವದು ಖಚಿತವಾಗಿದ್ದು, ಬಿಜೆಪಿಯಿಂದ ಬಿ.ಎಂ. ಸುರೇಶ್, ರಾಂಪ್ರಸಾದ್ ಅವರುಗಳು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ವಾರ್ಡ್ 6 ವಿಶ್ವೇಶ್ವರಯ್ಯ ಬ್ಲಾಕ್‍ನಿಂದ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶೀಲಾ ಡಿಸೋಜ ಸ್ಪರ್ಧೆಗಿಳಿಯಲು ಸಿದ್ದತೆ ಮಾಡಿಕೊಂಡಿದ್ದರೆ, ಬಿಜೆಪಿಯಿಂದ ಹಾಲಿ ಅಧ್ಯಕ್ಷೆ ವಿಜಯಲಕ್ಷ್ಮೀಸುರೇಶ್ ಸ್ಪರ್ಧಿಸುವದು ಖಚಿತ ಎನ್ನಲಾಗಿದೆ.

ವಾರ್ಡ್ 7 ರೇಂಜರ್‍ಬ್ಲಾಕ್ 2ನೇ ಹಂತದಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಾಲಿ ಸದಸ್ಯೆ, ಬಿಜೆಪಿಯ ಸುಶೀಲ ಅವರಿಗೆ ಜೆಡಿಎಸ್ ಆಫರ್ ನೀಡಿದೆ ಎನ್ನಲಾಗಿದೆ. ಬಿಜೆಪಿಯಿಂದ ಮಾಜೀ ಸದಸ್ಯೆ ದಾಕ್ಷಾಯಿಣಿ ಮತ್ತು ಸುಶೀಲ ನಡುವೆ ಟಿಕೆಟ್‍ಗೆ ಸ್ಪರ್ಧೆಯಿದೆ. ವಾರ್ಡ್ 8ರ ಜನತಾಕಾಲೋನಿಯಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‍ನಿಂದ ವೆಂಕಟೇಶ್ ಮತ್ತು ಸಂಜೀವ ಅವರುಗಳ ಹೆಸರುಗಳು ಕೇಳಿಬರುತ್ತಿದ್ದು, ಬಿಜೆಪಿಯಿಂದ ಪ್ರಮೋದ್ ಮತ್ತು ಶುಭಾಕರ್ ಅವರುಗಳ ನಡುವೆ ಟಿಕೇಟ್‍ಗೆ ಸ್ಪರ್ಧೆ ನಡೆಯುತ್ತಿದೆ.

ವಾರ್ಡ್ 9ರ ಸಿದ್ದಲಿಂಗೇಶ್ವರ ಬ್ಲಾಕ್‍ನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದ್ದು, ಅಭ್ಯರ್ಥಿಗೆ ಶೋಧ ನಡೆಯುತ್ತಿದ್ದರೆ, ಬಿಜೆಪಿಯಿಂದ ಲೀಲಾ ನಿರ್ವಾಣಿ ಹೆಸರು ಕೇಳಿಬರುತ್ತಿದೆ. ವಾರ್ಡ್ 10 ಮಹದೇಶ್ವರ ಬಡಾವಣೆಯಲ್ಲಿ ಮೈತ್ರಿಕೂಟದಿಂದ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಲಿದ್ದು, ಬಿಜೆಪಿಯಿಂದ ಗೀತಾ ಹರೀಶ್ ಮತ್ತು ದಿವ್ಯ ಮೋಹನ್ ಹೆಸರು ಚಾಲ್ತಿಗೆ ಬಂದಿದೆ.

ವಾರ್ಡ್ 11 ಸಿ.ಕೆ. ಸುಬ್ಬಯ್ಯ ರಸ್ತೆಯಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಕೆ.ಎ. ಆದಂ ಮತ್ತು ರಘು ಈರ್ವರಲ್ಲಿ ಓರ್ವರು ಕಾಂಗ್ರೆಸ್‍ನಿಂದ ಸ್ಪರ್ಧಿಸುವ ನಿರೀಕ್ಷೆಯಿದ್ದು, ಆದಂ ಅವರು ವಾರ್ಡ್ 4ಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ. ಬಿಜೆಪಿಯಿಂದ ಮಹೇಶ್, ಬಾಬು, ಗಿರಿಧರ್, ದಾಮೋಧರ್ ಗಟ್ಟಿ ಅವರುಗಳ ಹೆಸರು ಕೇಳಿಬಂದಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೆಯೇ ಉಳಿಸಿಕೊಂಡಿರುವ ವಾರ್ಡ್ 1 ಬಸವೇಶ್ವರ ರಸ್ತೆಯಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ ಆಕಾಂಕ್ಷಿಗಳು ಅಧಿಕವಿದ್ದಾರೆ. ಪತ್ರಕರ್ತ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಅವರು ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಇವರೊಂದಿಗೆ ಗಿರೀಶ್, ಶಿವಕುಮಾರ್, ಕೆ.ಜಿ. ಸುರೇಶ್, ಜೆ.ಸಿ. ಶೇಖರ್ ಅವರುಗಳು ಪೈಪೋಟಿ ನಡೆಸುತ್ತಿದ್ದಾರೆ.