ನಾಪೆÇೀಕ್ಲು, ಆ. 10: ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರು, ದೊಡ್ಡಪುಲಿಕೋಟು ಮತ್ತು ನೆಲಜಿ ಗ್ರಾಮಗಳನ್ನು ಅತಿವೃಷ್ಟಿ ಪ್ರದೇಶವೆಂದು ಸರಕಾರ ಘೋಷಿಸಬೇಕು ಎಂದು ಬೆಳೆಗಾರರಾದ ಮಚ್ಚೂರ ರವೀಂದ್ರ, ಹ್ಯಾರಿ, ಕರವಂಡ ಲವ ನಾಣಯ್ಯ, ಬೆಲ್ಲು, ಮಣವಟ್ಟಿರ ದಯಾ ಕುಟ್ಟಪ್ಪ, ಚಂಗೇಟಿರ ಕುಮಾರ್ ಸೋಮಣ್ಣ, ಮೂವೆರ ವಿನು, ಮತ್ತಿತರರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ವಿಭಾಗದಲ್ಲಿ ಹೆಚ್ಚಿನ ಮಳೆಯ ಕಾರಣ ಪ್ರತೀ ವರ್ಷವು ಶೇ. 30 ರಷ್ಟು ಕಾಫಿ, ಕಾಳುಮೆಣಸು, ಅಡಿಕೆ ದೊರೆಯುತ್ತದೆ. ಆದರೆ ಸುರಿದ ಭಾರೀ ಮಳೆಯ ಕಾರಣ ಶೇ. 5 ರಷ್ಟು ಫಸಲು ಕೂಡ ದೊರೆಯದಂತಾಗಿದೆ ಎಂದು ತಿಳಿಸಿದರು. ಪ್ರಸಕ್ತ ಈ ಬಾರಿ ಸುಮಾರು 210 ಇಂಚುಗಳಿಗಿಂತಲೂ ಹೆಚ್ಚಿನ ಮಳೆ ಈ ವ್ಯಾಪ್ತಿಗೆ ಸುರಿದಿದೆ. ಬೆಳೆಯನ್ನೇ ನಂಬಿ ಬದುಕುತ್ತಿರುವ ಬೆಳೆಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ. ಅದರೊಂದಿಗೆ ಕಾಡಾನೆ ಹಾವಳಿ ನಿರಂತರವಾಗಿದ್ದು, ಸಮಸ್ಯೆ ಉದ್ಭವಿಸಿದೆ. ಸರಕಾರ ನೀಡುವ ಅಲ್ಪ ಪರಿಹಾರದಿಂದ ಬದುಕಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತೀ ವರ್ಷವು ಈ ವ್ಯಾಪ್ತಿಯ ಬೆಳೆಗಳು ಹೆಚ್ಚಿನ ಮಳೆಯ ಕಾರಣ ಕೊಳೆ ರೋಗಕ್ಕೆ ತುತ್ತಾಗಿ ನಷ್ಟ ಉಂಟಾಗುತ್ತಿರುವದರಿಂದ ಸರಕಾರ ಈ ಪ್ರದೇಶಗಳನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ. - ಪಿ.ವಿ. ಪ್ರಭಾಕರ್