ಮಡಿಕೇರಿ, ಆ. 9: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಮಳೆಯಿಂದ ಎದುರಾಗಿರುವ ವಿದ್ಯುತ್ ಸಮಸ್ಯೆ ನಿವಾರಣೆಗೆ ಚೆಸ್ಕಾಂನಿಂದ ಸಕಾಲಿಕ ಕ್ರಮಗಳನ್ನು ಕೈಗೊಂಡಿದ್ದು, ಹಾನಿಗೊಂಡಿರುವ ಕಂಬಗಳ ಸಹಿತ ಇತರ ಯಾವದೇ ಉಪಕರಣಗಳ ಬದಲಾವಣೆಗೆ ಸಾಮಗ್ರಿ ಕೊರತೆಯಿಲ್ಲವೆಂದು ಚೆಸ್ಕಾಂ ಅಧೀಕ್ಷಕ ಕಾರ್ಯಪಾಲಕ ಅಭಿಯಂತರ ಪ್ರತಾಪ್ ಸ್ಪಷ್ಟಪಡಿಸಿದರು. ಇಂದು ಸಾರ್ವಜನಿಕ ಕುಂದುಕೊರತೆ ಆಲಿಸಿದ ಅವರು, ‘ಶಕ್ತಿ’ಯೊಂದಿಗೆ ಮಾತನಾಡುತ್ತಿದ್ದರು. ಮಡಿಕೇರಿಯ ಅರ್ಧ ಭಾಗ ಸಂಪರ್ಕ ಇದೀಗ ಗ್ರಾಮೀಣ ವಿಭಾಗದೊಂದಿಗೆ ಸೇರಿದ್ದು, ಇನ್ನು ಒಂದು ತಿಂಗಳ ಒಳಗೆ ನಗರದ ಎಲ್ಲ ಸಂಪರ್ಕವನ್ನು ಪ್ರತ್ಯೇಕಗೊಳಿಸಿ ನಗರ ಸಂಪರ್ಕವಾಗಿ ಮಾರ್ಪಡಿಸುವದಾಗಿ ‘ಶಕ್ತಿ’ಯ ಪ್ರಶ್ನೆಗೆ ಉತ್ತರಿಸಿ ಭರವಸೆಯಿತ್ತರು.ಕೊಡಗಿನಲ್ಲಿ ಆಕಸ್ಮಿಕವಾಗಿ ಭಾರೀ ಗಾಳಿ ಮಳೆಯಿಂದ ಎದುರಾಗುತ್ತಿರುವ ತೊಂದರೆ ತಪ್ಪಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೊರಗುತ್ತಿಗೆಯಲ್ಲಿ ತಾತ್ಕಾಲಿಕ ಒಂದು ನೂರು ನೌಕರರನ್ನು ನಿಯೋಜಿಸಲಾಗಿದೆ ಎಂದ ಅವರು, ಇಲ್ಲಿಯ ಚಳಿ ಗಾಳಿ ಹಾಗೂ ಮಳೆಗೆ ಈ ನೌಕರರು ಹೊಂದಿಕೊಳ್ಳುತ್ತಿಲ್ಲವೆಂದು ವಿಷಾದಿಸಿದರು.
ಮಡಿಕೇರಿ-ವೀರಾಜಪೇಟೆ ನಡುವೆ 66 ಕೆ.ವಿ. ವಿದ್ಯುತ್ ಮಾರ್ಗ ಅನುಷ್ಠಾನ ವಿಳಂಬಗೊಂಡಿರುವ ಬಗ್ಗೆ ‘ಶಕ್ತಿ’ ಗಮನ ಸೆಳೆದಾಗ ಮುಂಗಾರುವಿನ
(ಮೊದಲ ಪುಟದಿಂದ) ಬಳಿಕ ಸಮಸ್ಯೆ ಇತ್ಯರ್ಥಗೊಳ್ಳಲಿದ್ದು, ಯೋಜನೆ ಪರಿಪೂರ್ಣಗೊಳಿಸಲಾಗುವದು ಎಂದರು.
ಜಿಲ್ಲಾ ಕೇಂದ್ರದಲ್ಲಿ ವಿದ್ಯುತ್ ಓಲ್ಟೇಜ್ ಅಧಿಕಗೊಂಡು ಕೆಲವೊಮ್ಮೆ ಹಾನಿ ಎದುರಾಗುತ್ತಿರುವ ಬಗ್ಗೆ ಗಮನ ಸೆಳೆದಾಗ, ಸ್ಥಳೀಯ ಅಧಿಕಾರಿಗಳು ನಿಗಾವಹಿಸಿ ಅಂತಹ ಸಮಸ್ಯೆ ನಿವಾರಿಸಲಿದ್ದಾರೆ ಎಂದು ಅವರು ಭರವಸೆ ನೀಡಿದರು. ಮಡಿಕೇರಿಯಲ್ಲಿ ವಿದ್ಯುತ್ ವ್ಯತ್ಯಯದೊಂದಿಗೆ ಗ್ರಾಮೀಣ ಭಾಗಕ್ಕೆ ಸರಬರಾಜುಗೊಳ್ಳುವ ಮಾರ್ಗದಿಂದ ಉಂಟಾಗಲಿರುವ ಅಡಚಣೆ ತಪ್ಪಿಸುವ ದಿಸೆಯಲ್ಲಿಯೂ ಗಮನ ಹರಿಸಲಾಗುವದು ಎಂದು ಮಾಹಿತಿಯಿತ್ತರು.
ಕೊಡಗಿನ ಗಡಿ ಕರಿಕೆ ಸುತ್ತಮುತ್ತಲಿನ ಪ್ರದೇಶಗಳಿಗೆ ಕೇರಳದ ಪಾಣತ್ತೂರಿನಿಂದ ವಿದ್ಯುತ್ ಪೂರೈಕೆಯಾಗುತ್ತಿದ್ದು, ಕರಿಕೆ ವ್ಯಾಪ್ತಿಯ ಸಂಪರ್ಕ ಮಾರ್ಗದೊಂದಿಗೆ ಉಪಕರಣಗಳು ತೀರಾ ಹಳೆಯದಾಗಿರುವ ಕಾರಣ ಪದೇ ಪದೇ ವಿದ್ಯುತ್ ಸಮಸ್ಯೆಯಾಗುತ್ತಿದೆ ಎಮದು ಅಲ್ಲಿನ ನಿವಾಸಿ ವಕೀಲ ಕೋಡಿ ನಿರ್ಮಲಾನಂದ ಗಮನ ಸೆಳೆದರು. ಈ ಬಗ್ಗೆ ಮಳೆಗಾಲ ಮುಗಿದೊಡನೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲಾಗುವದು ಎಂದು ಅಧಿಕಾರಿ ಭರವಸೆ ನೀಡಿದರು.
ಮಡಿಕೇರಿ ತಾಲೂಕಿನ ವಿವಿಧೆಡೆಯ ಸಮಸ್ಯೆಗಳ ಬಗ್ಗೆ ಅನೇಕ ಗ್ರಾಹಕರು ಇಂದಿನ ಕುಂದುಕೊರತೆ ಸಭೆಯಲ್ಲಿ ತಮ್ಮ ಅಳಲು ತೋಡಿಕೊಳ್ಳುತ್ತಾ ವಿದ್ಯುತ್ ಸಮರ್ಪಕ ಪೂರೈಕೆಯೊಂದಿಗೆ ಸಕಾಲದಲ್ಲಿ ಬಿಲ್ಗಳನ್ನು ನೀಡಿ ಹಣ ಪಾವತಿಗೆ ಅನುವು ಮಾಡಿಕೊಡುವಂತೆ ಗಮನ ಸೆಳೆÀದರು. ಸಭೆಯಲ್ಲಿ ಕಾರ್ಯಪಾಲಕ ಅಭಿಯಂತರರಾದ ತಾರಾ, ಇತರ ಅಧಿಕಾರಿಗಳಾದ ಆಲ್ಪೊನ್ನಾ, ದೊಡ್ಡಮಾನಿ, ಸಂಪತ್, ಯತೀಶ್ ಮೊದಲಾದವರು ಉಪಸ್ಥಿತರಿದ್ದರು.