ಮಡಿಕೇರಿ, ಆ. 9: ರೋಟರಿ ಜಿಲ್ಲೆ ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಜಿಲ್ಲೆ 3181ರ ಸದಸ್ಯತ್ವ ಅಭಿವೃದ್ಧಿ, ಪೋಲಿಯೋ ಪ್ಲಸ್ ಹಾಗೂ ಸಾರ್ವಜನಿಕ ಅಭಿಪ್ರಾಯ ಕುರಿತು ಎರಡು ದಿನಗಳ ಕಾರ್ಯಾಗಾರ ತಾ. 11 ಮತ್ತು 12 ರಂದು ಕಾವೇರಿ ಹಾಲ್‍ನಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸದಸ್ಯತ್ವ ಅಭಿವೃದ್ಧಿ ಕಾರ್ಯಕ್ರಮದ ಅಧ್ಯಕ್ಷ ಬಿ.ಕೆ.ರವೀಂದ್ರ ರೈ ಅವರು, ವಿಶ್ವ 125 ದೇಶಗಳಲ್ಲಿ ಸಾಂಕ್ರಮಿಕ ರೂಪದಲ್ಲಿ ಕಾಣಿಸಿಕೊಂಡಿದ್ದ ಪೋಲಿಯೋ ಕಾಯಿಲೆಗೆ ವರ್ಷಕ್ಕೆ ಸುಮಾರು 3.50 ಲಕ್ಷ ಮಕ್ಕಳು ಬಲಿಯಾಗುತ್ತಿದ್ದರು. ಪೋಲಿಯೋ ನಿರ್ಮೂಲನೆಗಾಗಿ ರೋಟರಿ ಸಂಸ್ಥೆ ಆರಂಭಿಸಿದ ಆಂದೋಲನದಿಂದಾಗಿ ಇದೀಗ ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನವನ್ನು ಹೊರತುಪಡಿಸಿದಲ್ಲಿ ಉಳಿದ ರಾಷ್ಟ್ರಗಳು ಸಂಪೂರ್ಣ ಪೋಲಿಯೋ ಮುಕ್ತವಾಗಿವೆ. ಪ್ರಸಕ್ತ ಸಾಲಿನಲ್ಲಿ ಅಫ್ಘಾನಿಸ್ಥಾನದಲ್ಲಿ 10 ಹಾಗೂ ಪಾಕಿಸ್ತಾನದಲ್ಲಿ 3 ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದರು.

ಭಾರತದಲ್ಲಿ 2011ರ ಜ. 13 ರಂದು ಕೊನೆಯ ಪ್ರಕರಣ ಪತ್ತೆಯಾಗಿದ್ದು, 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಿದ್ದರೂ, ನೆರೆಯ ಎರಡು ರಾಷ್ಟ್ರಗಳಲ್ಲಿ ಇನ್ನೂ ಪೋಲಿಯೋ ನಿರ್ಮೂಲನೆಯಾಗದ ಕಾರಣ ದೇಶದಲ್ಲಿ ಇಂದಿಗೂ ಪಲ್ಸ್ ಪೋಲಿಯೋ ಕಾರ್ಯಕ್ರಮ ಮುಂದುವರಿಸಿದೆ ಎಂದು ತಿಳಿಸಿದರು.

ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ರೋಟರಿ ಸಂಸ್ಥೆಯ ಇದುವರೆಗೆ 9350 ಕೋಟಿ ರೂ.ಗಳನ್ನು ನೀಡಿದ್ದು, ಭಾರತಕ್ಕೆ 1096ಕೋಟಿ ಹಣವನ್ನು ಒದಗಿಸಿದೆ ಎಂದು ತಿಳಿಸಿದ ಅವರು, ಪೋಲಿಯೋ ಮುಕ್ತ ವಿಶ್ವ ರೋಟರಿಯ ಕನಸಾಗಿದ್ದು, ಅದು ಇದೀಗ ನನಸಾಗುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ ಅವರು ಮಾತನಾಡಿ, ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನದಲ್ಲಿ ಪೋಲಿಯೋ ನಿರ್ಮೂಲನೆ ಆಂದೋಲನದಲ್ಲಿ ಭಾಗವಹಿಸಿದ್ದ ರೋಟರಿ ಸದಸ್ಯರು ಹಾಗೂ ಅಧಿಕಾರಿಗಳನ್ನು ಗುಂಡಿಟ್ಟು ಹತ್ಯೆ ಮಾಡಿದ ಉದಾಹರಣೆಗಳಿದ್ದು, ಇದರೊಂದಿಗೆ ಇದು ಅಮೇರಿಕಾದ ಸಂತಾನಹರಣ ಕಾರ್ಯಕ್ರಮ ಎಂಬ ತಪ್ಪು ಕಲ್ಪನೆ ಅವರಲ್ಲಿದೆ. ಈ ಕಾರಣಕ್ಕಾಗಿ ಆ ಎರಡು ದೇಶಗಳಲ್ಲಿ ಪೋಲಿಯೋ ನಿರ್ಮೂಲನೆ ಯಾಗದಿರುವದಕ್ಕೆ ಕಾರಣವಾಗಿದೆ ಎಂದು ವಿವರಿಸಿದರು.

ರೋಟರಿ ಸಂಸ್ಥೆಯು ಕೇಂದ್ರ ಸರಕಾರದ ಮೂಲಕ ಸಾಕಷ್ಟು ಅನುದಾನವನ್ನು ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಒದಗಿಸುತ್ತಿದ್ದು, ಈ ಕುರಿತು ಅಧಿಕಾರಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮಾಹಿತಿಯ ಕೊರತೆ ಇದೆ ಎಂದೂ ಹೇಳಿದರು.

ಸದಸ್ಯತ್ವ ಅಭಿವೃದ್ಧಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಕಾರ್ಯಾಗಾರದ ಅಧ್ಯಕ್ಷ ಎನ್.ಕೆ. ಮೋಹನ್ ಪ್ರಭು ಅವರು, 1905ರಲ್ಲಿ ಶಿಕಾಗೋ ನಗರದಲ್ಲಿ ಹುಟ್ಟಿದ ರೋಟರಿ ಸಂಸ್ಥೆ ಕಳೆದ 113 ವರ್ಷಗಳಲ್ಲಿ 200ಕ್ಕೂ ಅಧಿಕ ದೇಶಗಳಲ್ಲಿ ವ್ಯಾಪಿಸಿದ್ದು, ಸುಮಾರು 35,810 ಕ್ಲಬ್‍ಗಳು ಹಾಗೂ 12,35,418 ಸದಸ್ಯರನ್ನು ಹೊಂದಿದೆ. ಭಾರತದಲ್ಲಿ 3683 ಕ್ಲಬ್‍ಗಳಿದ್ದು, 15,034 ಮಹಿಳೆಯರೂ ಸೇರಿದಂತೆ 1,42,583 ಮಂದಿ ಸದಸ್ಯರಿದ್ದಾರೆ. ಈ ಸಾಲಿನಲ್ಲಿ ಹೆಚ್ಚಾಗಿ ಮಹಿಳಾ ಸದಸ್ಯರನ್ನು ಸೇರಿಸುವ ಗುರಿ ಹೊಂದಲಾಗಿದ್ದು, ಆ ನಿಟ್ಟಿನಲ್ಲಿ ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದು ಹೇಳಿದರು.

ದಕ್ಷಿಣಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3181ರಲ್ಲಿ 73 ಕ್ಲಬ್‍ಗಳು ಹಾಗೂ 3073 ಮಂದಿ ಸದಸ್ಯರಿದ್ದು, ಈ ಸಾಲಿನಲ್ಲಿ 500 ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಉನ್ನತಿ ಕಾರ್ಯಾಗಾರಕ್ಕೆ ನಾಳೆ ಚಾಲನೆ

‘ಉನ್ನತಿ’ ಶೀರ್ಷಿಕೆಯಡಿ ನಡೆಯಲಿರುವ ಎರಡು ದಿನಗಳ ಕಾರ್ಯಾಗಾರಕ್ಕೆ ತಾ. 11ರ ಸಂಜೆ 4 ಗಂಟೆಗೆ ರೋಟರಿ ಜಿಲ್ಲೆ 3150ರ ನಿಕಟಪೂರ್ವ ಗವರ್ನರ್ ರವಿ ವದ್ಲಮನಿ ಅವರು ಚಾಲನೆ ನೀಡಲಿದ್ದಾರೆ. ಪೋಲಿಯೋ ನಿರ್ಮೂಲನಾ ಕಾರ್ಯಕ್ರಮದ ರಾಷ್ಟ್ರಿಯ ಪ್ರಮುಖರಾದ ಡಾ|| ಸುಧೀರ್ ನಾಯಕ್ ಪ್ರಾಸ್ತಾವಿಕ ನುಡಿಯಾಡಲಿದ್ದಾರೆ. ಆ.12ರ ಪೂರ್ವಾಹ್ನ 9 ಗಂಟೆಗೆ ರೋಟರಿ ಜಿಲ್ಲೆ 3202ರ ವಿ.ಜಿ. ನೈನಾರ್ ಉದ್ಘಾಟಿಸಲಿದ್ದು, ರೋಟರಿ ಜಿಲ್ಲೆ 3181ರ ಗವರ್ನರ್ ಪಿ.ರೋಹಿದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಗವರ್ನರ್ ಪಿ. ರೋಹಿನಾಥ್ ಉಪಸ್ಥಿತರಿರುತ್ತಾರೆ. ಕಾರ್ಯಾಗಾರದಲ್ಲಿ ಸುಮಾರು ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ರವಿಶಂಕರ್ ಹಾಗೂ ಕಾರ್ಯಾಗಾರ ಸಮಿತಿಯ ಕಾರ್ಯದರ್ಶಿ ಡಿ.ಎಂ. ತಿಲಕ್ ಉಪಸ್ಥಿತರಿದ್ದರು.