ಸೋಮವಾರಪೇಟೆ, ಆ. 9: ತಾಲೂಕಿನ ಬೀಟಿಕಟ್ಟೆಯಿಂದ ಬಸವನಕೊಪ್ಪ-ಕೋಟೆಯೂರು ಸಂಪರ್ಕ ರಸ್ತೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ.

ಭಾರೀ ಮಳೆಗೆ ರಸ್ತೆಯ ಗುಂಡಿಗಳು ಕೆರೆಗಳಂತಾಗಿದ್ದು, ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದನ್ನು ಮನಗಂಡ ಸ್ಥಳೀಯರೇ ಶ್ರಮದಾನದ ಮೂಲಕ ರಸ್ತೆಯ ಗುಂಡಿಗಳನ್ನು ಮುಚ್ಚಿದರು.

ಈ ಭಾಗದಲ್ಲಿರುವ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು, ರಸ್ತೆಯ ಅವ್ಯವಸ್ಥೆಯಿಂದ ವಾಹನಗಳು ಆಗಮಿಸದ ಹಿನ್ನೆಲೆ ತೀವ್ರ ಸಮಸ್ಯೆಯಾಗಿತ್ತು.

ಈ ಹಿನ್ನೆಲೆ ಸ್ಥಳೀಯ ಯುವಕರೇ ಸೇರಿಕೊಂಡು ರಸ್ತೆಯ ಗುಂಡಿಗಳನ್ನು ಮುಚ್ಚಿದರಲ್ಲದೇ, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭ ರಸ್ತೆ ನಿರ್ಮಿಸುವದಾಗಿ ಪೊಳ್ಳು ಭರವಸೆಗಳನ್ನು ನೀಡಲಷ್ಟೇ ಜನಪ್ರತಿನಿಧಿಗಳು ಮೀಸಲಾಗಿದ್ದಾರೆ. ನಂತರ ಸಮಸ್ಯೆಗಳ ಬಗ್ಗೆ ಯಾವದೇ ಸ್ಪಂದನೆ ದೊರೆಯುತ್ತಿಲ್ಲ. ಹೀಗೆಯೇ ಮುಂದುವರೆದರೆ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.