ಮಡಿಕೇರಿ, ಆ. 9: ತೀರಾ ಕಿಷ್ಕಿಂದೆಯಾಗಿರುವ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣವನ್ನು ಮುಂದಿನ ದಸರಾ ಒಳಗಾಗಿ ನೂತನ ನಿಲ್ದಾಣಕ್ಕೆ ಸ್ಥಳಾಂತರಗೊಳಿಸಲಾಗುವದು ಎಂದು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತಿಳಿಸಿದ್ದಾರೆ.
ನಗರದ ವೆಬ್ಸ್ ಬಳಿ ಕೃಷಿ ಸಂಶೋಧನಾ ಕ್ಷೇತ್ರದಿಂದ ಮಂಜೂರಾಗಿರುವ 3 ಎಕರೆ ಜಮೀನನ್ನು ಬಳಸಿಕೊಂಡು, ಅಂದಾಜು ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಕಳಪೆಯಾಗಿಲ್ಲವೆಂದು ಇದೇ ಸಂದರ್ಭ ಕಾವೇರಮ್ಮ ಸೋಮಣ್ಣ ಸಮರ್ಥನೆ ನೀಡಿದ್ದಾರೆ.
ನಿನ್ನೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಸ್ಂತ್ ಕನ್ಸ್ಲ್ಟೆನ್ಸಿ ವತಿಯಿಂದ ಕ್ರಿಯಾ ಯೋಜನೆಯ ನೀಲ ನಕಾಶೆ ತಯಾರಿಸಿದ್ದಾಗಿ ಬೊಟ್ಟು ಮಾಡಿದ ಅವರು, ಆ ಪ್ರಕಾರ ಕಾಮಗಾರಿ ಪೂರೈಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೆಲವು ತಾಂತ್ರಿಕ ಕಾರಣದಿಂದ ಸಕಾಲದಲ್ಲಿ ಸರಕಾರದಿಂದ ಕಾಮಗಾರಿಗೆ ಮಂಜೂರಾತಿ ಲಭಿಸದೆ, ನಗರಸಭೆಯಿಂದಲೇ ಕೆಲಸ ಕೈಗೊಳ್ಳಬೇಕಾಯಿತು ಎಂದು ತಿಳಿಸಿದ ಅಧ್ಯಕ್ಷರು, ಕಾಮಗಾರಿ ಗುಣಮಟ್ಟ ಹಾಗೂ ಕೆಲಸ ಪೂರೈಕೆ ಸಂಬಂಧ, ತಾಂತ್ರಿಕ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಿಶೀಲನೆ ಬಳಿಕ ಹಂತ ಹಂತವಾಗಿ ಹಣ ಪಾವತಿಸಲಾಗಿದೆ ಎಂದರು.
ಆ ಪ್ರಕಾರ ಬಸ್ ನಿಲ್ದಾಣ ಕೆಲಸಕ್ಕೆ ರೂ. 263.63 ಲಕ್ಷ, ಒಳಾಂಗಣದ ರಸ್ತೆ ಕಾಮಗಾರಿಗೆ ರೂ. 171.25 ಲಕ್ಷ, ತಡೆಗೋಡೆಗೆ ರೂ. 11.79 ಲಕ್ಷ, ಶೌಚಾಲಯಕ್ಕಾಗಿ ರೂ. 12.76 ಲಕ್ಷ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದ ಅವರು, ನಲ್ಲಿ ಅಳವಡಿಸಲು ರೂ. 5.55 ಲಕ್ಷ, ವಿದ್ಯುದೀಕರಣಕ್ಕೆ ರೂ. 8.15 ಲಕ್ಷ ಸೇರಿದಂತೆ ರೂ. 487.07 ಲಕ್ಷ ವ್ಯಯವಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ ಅಂದಾಜು ಪಟ್ಟಿಯಂತೆ ರೂ. 499 ಲಕ್ಷದ ಕ್ರಿಯಾ ಯೋಜನೆ ಸಿದ್ಧಗೊಳಿಸಿದ್ದು, ಪ್ರಾರಂಭಿಕ ಹಂತದ ಯೋಜನೆ ಪ್ರಕಾರ ರೂ. 19.37 ಕೋಟಿಯ ಯೋಜನೆ ಚಿಂತಿಸಲಾಗಿದ್ದು, ಈ ಮೊತ್ತ ತಗ್ಗಿಸಿ ತುರ್ತು ಕೆಲಸ ಕೈಗೊಂಡಿದ್ದಾಗಿ ಸ್ಪಷ್ಟಪಡಿಸಿದರು. ಈ ಬಗ್ಗೆ ಯಾವದೇ ತನಿಖೆಗೆ ಸಿದ್ಧ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಪ್ರಬಾರ ಆಯುಕ್ತ ಗೋಪಾಲಕೃಷ್ಣ ಹಾಜರಿದ್ದರು.