ಗೋಣಿಕೊಪ್ಪಲು, ಆ. 9: ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿರುವ ಕ್ರೀಡಾ ವಸತಿ ಶಾಲೆಗೆ ದಿಡೀರ್ ಭೇಟಿ ನೀಡುವ ಮೂಲಕ ಇಲ್ಲಿನ ವಿದ್ಯಾರ್ಥಿ,ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಆಲಿಸಿದರು.
ಊಟದ ಕೊಠಡಿಗೆ ತೆರಳಿ ಆಹಾರದ ಗುಣಮಟ್ಟ ಹಾಗೂ ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆಗಾಗಿ ಮೂರು ಗೀಸರ್ಗಳನ್ನು ಖರೀದಿಸಿ ಕೂಡಲೇ ಅಳವಡಿಸುವಂತೆ ಕ್ರೀಡಾ ಇಲಾಖೆಯ ಅಧಿಕಾರಿ ಜಯಲಕ್ಷ್ಮಿ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೂಚನೆ ನೀಡಿದರು.
ನಿಲಯದ ವಿದ್ಯಾರ್ಥಿನಿಯರ ನೀರಿನ ಸಮಸ್ಯೆ, ಅಳವಡಿಸಿರುವ ಸಿ.ಸಿ.ಟಿ.ವಿಯ ಬಗ್ಗೆ ವಿದ್ಯಾರ್ಥಿಗಳು ಅಧ್ಯಕ್ಷರ ಮುಂದೆ ಅಹವಾಲು ಹೇಳಿಕೊಂಡರು. ಸ್ಥಳೀಯ ಗ್ರಾಮ ಪಂಚಾಯಿತಿ ಪಿ.ಡಿ.ಓ. ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪ್ರತಿನಿತ್ಯ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ನಿಲಯಕ್ಕೆ ಬೇಕಾಗಿರುವ ಅವಶ್ಯ ವಸ್ತುಗಳ ಬಗ್ಗೆ ಲಿಖಿತವಾಗಿ ಪಟ್ಟಿಯನ್ನು ನೀಡುವಂತೆ ಕಿರಣ್ ಕಾರ್ಯಪ್ಪ ವಸತಿ ನಿಲಯದ ವಾರ್ಡನ್ ಸುರೇಶ್ ಅವರಿಗೆ ಸೂಚನೆ ನೀಡಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟ ದಿಂದ ಕೂಡಿರುವ ಹಾಲು, ಹಣ್ಣು, ನೀಡುವಂತೆ ತಿಳಿಸಿದರು. ವಿದ್ಯಾರ್ಥಿ ಗಳಿಗೆ ಯಾವದೇ ತೊಂದರೆಯಾಗ ದಂತೆ ಎಚ್ಚರಿಕೆ ವಹಿಸಬೇಕೆಂದು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
-ಹೆಚ್.ಕೆ. ಜಗದೀಶ್