ಗೋಣಿಕೊಪ್ಪಲು, ಆ. 9: ವಾಣಿಜ್ಯ ನಗರ ಗೋಣಿಕೊಪ್ಪಲಿನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಡಳಿತ ಅಧಿಕಾರಿಯ ಕೆಲಸದ ಬಗ್ಗೆ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಗರಂ ಆದ ಪ್ರಕರಣ ನಡೆಯಿತು.
ಸರ್ಕಾರದ ನಿಯಮದಂತೆ ಮೂರು ತಿಂಗಳಿಗೊಮ್ಮೆ ಆರೋಗ್ಯ ರಕ್ಷಾ ಸಮಿತಿಯ ಸಭೆ ಕರೆಯಬೇಕೆಂಬ ನಿಯಮವಿದ್ದರೂ, ಎಂಟು ತಿಂಗಳ ನಂತರ ಕಾಟಾಚಾರಕ್ಕೆ ಸಭೆ ಕರೆದಿರುವ ಬಗ್ಗೆ ಅಧ್ಯಕ್ಷರು ಸಿಡಿಮಿಡಿಗೊಂಡರು. ಕೇವಲ ಬೆರಳಣಿಕೆಯ ಸಮಿತಿಯ ಸದಸ್ಯರು ಹೊರತು ಪಡಿಸಿ ಬೇರೆ ಯಾವದೇ ಜನಪ್ರತಿನಿಧಿಗಳು ಸಭೆಗೆ ಆಗಮಿಸಿರಲಿಲ್ಲ.
ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಬೇಕಾದ ಆಡಳಿತಾಧಿಕಾರಿ, ಅಧ್ಯಕ್ಷರು ಕೇಳುತ್ತಿದ್ದ ಪ್ರಶ್ನೆಗೆ ಸಮಜಾಯಿಸಿಕೆ ಕೊಡುವಲ್ಲಿ ಮೀನಾ ಮೇಷ ಎಣಿಸುತ್ತಿದ್ದುದು ಕಂಡು ಬಂತು.
ಅಧಿಕಾರಿಗಳ ಮಾತಿಗೆ ತೃಪ್ತರಾಗದ ಸ್ಥಳೀಯ ಜಿಲ್ಲಾ ಪಂಚಾಯಿತಿಯ ಸದಸ್ಯ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ. ಬೋಪಣ್ಣ ಆಡಳಿತ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯ ಡಿ ದರ್ಜೆ ನೌಕರ ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಶುಚಿತ್ವದ ಬಗ್ಗೆ ಗಮನ ಹರಿಸುತ್ತಿಲ್ಲ ಎಂದಾಗ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಉತ್ತರಿಸಿ ಇಂದಿನಿಂದಲೇ ಈ ಬಗ್ಗೆ ಕ್ರಮ ವಹಿಸುತ್ತೇವೆ ಎಂದರು.
ಸಾಕಷ್ಟು ಔಷಧಿ ಲಭ್ಯವಿದ್ದರೂ, ರೋಗಿಗಳಿಗೆ ಮೆಡಿಕಲ್ ಅಂಗಡಿಗೆ ಚೀಟಿ ಕಳುಹಿಸುತ್ತಿರುವ, ಆ್ಯಂಬುಲೆನ್ಸ್ ಚಾಲಕ ಇಲ್ಲದಿರುವ ಹಾಗೂ ಆಸ್ಪತ್ರೆಯ ಒಳಭಾಗದಲ್ಲಿರುವ ಕ್ಯಾಂಟಿನ್ ತೆರವುಗೊಳಿಸುವ ಬಗ್ಗೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ಅಧಿಕಾರಿ ಆ್ಯಂಬುಲೆನ್ಸ್ ಚಾಲಕನಿಗೆ ತಂಗುವ ವ್ಯವಸ್ಥೆ ಇಲ್ಲದ ಬಗ್ಗೆ ಚಾಲಕರು ಆಸ್ಪತ್ರೆಯಲ್ಲಿ ಇರಲು ಕಷ್ಟವಾಗುತ್ತಿದೆ ಎಂದರು.
ಇವರ ಮಾತಿಗೆ ತೃಪ್ತರಾಗದ ಚಲನ್‍ರವರು ಆಸ್ಪತ್ರೆಯ ಪಾರ್ಕಿಂಗ್‍ಗೆ ಕಡಿವಾಣ
ಆಸ್ಪತ್ರೆಯ ಆವರಣದಲ್ಲಿ ರೋಗಿಗಳಲ್ಲದವರು ವಾಹನ ಪಾರ್ಕಿಂಗ್ ಮಾಡುತ್ತಿರುವ ಬಗ್ಗೆ ಸಮಿತಿಯ ಸದಸ್ಯ ಅಬ್ದುಲ್ ಸಮ್ಮದ್ ಸಭೆಯ ಗಮನ ಸೆಳೆದರು. ಇವರ ಮಾತಿಗೆ ಉತ್ತರಿಸಿದ ಅಧಿಕಾರಿಗಳು ಈ ಬಗ್ಗೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ಜನನಿ ಸುರಕ್ಷ ಯೋಜನೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ಸ್ಕ್ಯಾನಿಂಗ್ ಮಾಡುವ ಸೌಲಭ್ಯವಿದೆ. ಈ ವ್ಯವಸ್ಥೆಯನ್ನು ಪೊನ್ನಂಪೇಟೆಯ ಆಶ್ರಮದಲ್ಲಿರುವ ಆಸ್ಪತ್ರೆಯ ವೈದ್ಯರ ಸಹಾಯ ಪಡೆಯುವ ಮೂಲಕ ಅಲ್ಲಿಗೆ ಕಳುಹಿಸಿಕೊಡುವ ಕಾರ್ಯ ಮಾಡಬೇಕೆಂದು ಅಧ್ಯಕ್ಷರು ಸೂಚನೆ ನೀಡಿದರು.
ದಿನ ನಿತ್ಯ ನೂರಾರು ರೋಗಿಗಳು ಗೋಣಿಕೊಪ್ಪ ಆಸ್ಪತ್ರೆಗೆ ಆಗಮಿಸುತ್ತಿರುವದರಿಂದ ಇಲ್ಲಿಯ ಸಿಬ್ಬಂದಿಗಳಿಂದ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಪಾಲಿಬೆಟ್ಟ,ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಹೆಚ್ಚುವರಿ ಸಿಬ್ಬಂದಿಗಳನ್ನು ಗೋಣಿಕೊಪ್ಪ ಆಸ್ಪತ್ರೆಗೆ ನಿಯೋಜಿಸಿದಲ್ಲಿ ಸಿಬ್ಬಂದಿ ಕೊರತೆ ನಿಭಾಯಿಸಬಹುದು ಈ ಬಗ್ಗೆ ಕ್ರಮ ವಹಿಸುವಂತೆ ಅಧ್ಯಕ್ಷರಿಗೆ ಆಡಳಿತಾಧಿಕಾರಿ ಡಾ.ಗಣೇಶ್ ಮನವಿ ಮಾಡಿದರು ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವದಾಗಿ ಕಿರಣ್ ಕಾರ್ಯಪ್ಪ ಭರವಸೆ ನೀಡಿದರು. ಲಭ್ಯವಿರುವ ಅನುದಾನದಲ್ಲಿ ಆಸ್ಪತ್ರೆಗೆ ಬೇಕಾದ ಸಲಕರಣೆಗಳನ್ನು ಖರೀದಿಸುವಂತೆ, ಮುಂದಿನ ಸಭೆಯ ಒಳಗೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಆಸ್ಪತ್ರೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವಂತೆ ತಾಲೂಕು ಪಂಚಾಯ್ತಿ ಅಧ್ಯಕ್ಷರಾದ ಸ್ಮಿತ ಪ್ರಕಾಶ್ ಸೂಚನೆ ನೀಡಿದರು.ಸಭೆಯಲ್ಲಿ ಸ್ಥಳೀಯ ವೈದ್ಯಾಧಿಕಾರಿಗಳು,ಸಿಬ್ಬಂದಿಗಳು,ಸಮಿತಿ ಸದಸ್ಯರಾದ ಪದ್ಮಿನಿ ಶಶಿಧರ್ ಸೇರಿದಂತೆ ಇನ್ನಿತರರು ಹಾಜರಿದ್ದರು.