ಸಿದ್ದಾಪುರ, ಆ. 7: ಕಾಡಾನೆಗಳ ಹಾವಳಿಯಿಂದಾಗಿ ತತ್ತರಿಸಿರುವ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡುವಿನ ಭಾಗದಲ್ಲಿ ಇದೀಗ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ನೆಲ್ಯಹುದಿಕೇರಿ ಗ್ರಾಮದ ನಲ್ವತೆಕ್ರೆ,, ಅತ್ತಿಮಂಗಲ, ಅರೆಕಾಡು, ಅಭ್ಯತ್‍ಮಂಗಲ, ಬೆಟ್ಟದಕಾಡು ವ್ಯಾಪ್ತಿಯಲ್ಲಿ ದಿನನಿತ್ಯ ಸಂಜೆಯಾಗುತ್ತಲೇ ಕಾಡಾನೆಗಳ ಹಿಂಡು ಬಂದು ತೋಟದಿಂದ ತೋಟಕ್ಕೆ ಲಗ್ಗೆ ಇಡುತ್ತಿವೆ.
ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಪಟಾಕಿ ಸಿಡಿಸಿದರೂ ಕೂಡ ಕಾಡಾನೆಗಳು ಕಾಫಿ ತೋಟ ಬಿಟ್ಟು ಕದಲುತ್ತಿಲ್ಲ. ಸಿದ್ದಾಪುರ ಸಮೀಪದ ಅಭ್ಯತ್‍ಮಂಗಲ ಗ್ರಾಮದ ನಿವಾಸಿ ಹೆಚ್.ಎಸ್. ಭರತ್ ಬೋಪಣ್ಣ ಎಂಬವರ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ದಾಂದಲೆ ನಡೆಸಿ ಕಾಫಿ ಗಿಡಗಳು ಹಾಗೂ ತೆಂಗಿನ ಮರಗಳನ್ನು ಧ್ವಂಸಗೊಳಿಸಿದ್ದು, ಅಪಾರ ನಷ್ಟ ಸಂಭವಿಸಿದೆ.
ಮಾಲ್ದಾರೆ ಹಾಗೂ ಬಾಡಗ ಬಾಣಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹುಲಿ ಧಾಳಿ ನಡೆಸಿ ಹಲವಾರು ಜಾನುವಾರುಗಳನ್ನು ಸಾಯಿಸಿದ್ದ ಘಟನೆ ನಡೆದಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ನೆಲ್ಯಹುದಿಕೇರಿಯಿಂದ ಬೆಟ್ಟದಕಾಡುವಿನಲ್ಲಿ ಹುಲಿಯು ನಡೆದಾಡಿರುವ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ವನ್ಯಜೀವಿಗಳ ಉಪಟಳದಿಂದ ಕಾರ್ಮಿಕರು ಹಾಗೂ ಶಾಲೆಗೆ ತೆರಳುವ ಮಕ್ಕಳು ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯ ಇಲಾಖಾಧಿಕಾರಿಗಳು ವನ್ಯಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬೇಕೆಂದು ನೆಲ್ಯಹುದಿಕೇರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
-ವಾಸು