ಮಡಿಕೇರಿ, ಆ. 7: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಎನ್.ಎಸ್.ಎಸ್. ಶಿಬಿರದ ಉದ್ಘಾಟನಾ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಪಾಲ್ಗೊಂಡಿದ್ದರು. ವಿಶೇಷ ಉಪನ್ಯಾಸವನ್ನು ಟಿ. ವೆಂಕಟೇಶ್ ಹಾಗೂ ಅಧ್ಯಕ್ಷ ಸ್ಥಾನ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರು ನೀಡಿದರು.
ಗಿಡಗಳಿಗೆ ನೀರು ಹಾಕುವದರ ಮೂಲಕ ಎಲೆ-ಅಡಿಕೆ ನೀಡುವದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಸಂದರ್ಭ ಮಾತನಾಡಿದ ಸುನಿಲ್ ಸುಬ್ರಮಣಿ ಅವರು, ಶಿಬಿರದ ಕುರಿತಾದ ಹಲವು ವಿಷಯಗಳನ್ನು ತಿಳಿಸಿದರು. ಎನ್.ಎಸ್.ಎಸ್.ನಲ್ಲಿ ಪ್ರತಿಯೊಬ್ಬರು ಬಾಗಿಯಾಗಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕಾಗಿ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಟಿ.ಎಸ್. ವೆಂಕಟೇಶ್ ಅವರು ವಿದ್ಯಾರ್ಥಿಗೆ ಸ್ವಚ್ಛತೆಯ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ, ನಮ್ಮ ಪ್ರತಿಭೆಗಳನ್ನು ಹಾಗೂ ವ್ಯಕ್ತಿತ್ವವನ್ನು ರೂಪಿಸಲು ಈ ಶಿಬಿರ ಸಹಕಾರಿಯಾಗಿದೆ. ಪ್ರತಿಯೊಬ್ಬರು ಈ ಚಟುವಟಿಕೆಯಲ್ಲಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳುವದರ ಮೂಲಕ ದೇಶದ ಅಭಿವೃದ್ಧಿಯ ನಿರ್ಮಾಣದಲ್ಲಿ ಭಾಗಿಯಾಗುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಕನ್ನಡ ವಿಭಾಗದ ಉಪನ್ಯಾಸರಾದ ಮಂಜುನಾಥ್, ಗೀತಾಂಜಲಿ, ಸಚಿನ್, ಎನ್.ಎಸ್.ಎಸ್. ವಿಭಾಗದ ನಾಯಕರುಗಳಾದ ಜಿ. ರಾಜೇಶ್, ಪುಣ್ಯ ಪಾಲ್ಗೊಂಡಿದ್ದರು.