ಮಡಿಕೇರಿ, ಆ. 7: ನಾಪೋಕ್ಲು ಕೊಡವ ಸಮಾಜದ ಅಧೀನದಲ್ಲಿ ಕಳೆದ ವರ್ಷದಿಂದ ಅಸ್ತಿತ್ವಕ್ಕೆ ಬಂದಿರುವ ಪೊಮ್ಮಕ್ಕಡ ಪರಿಷತ್‍ನ ವತಿಯಿಂದ ಇದೇ ಪ್ರಥಮ ಬಾರಿಗೆ ಕಕ್ಕಡ ಪದಿನೆಟ್ಟ್‍ನ ಕಾರ್ಯಕ್ರಮ ವನ್ನು ಸಂಭ್ರಮದಿಂದ ಆಚರಿಸಲಾಯಿತು.

ನಾಪೋಕ್ಲು ಕೊಡವ ಸಮಾಜ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಕ್ಕಡ 18ರ ವಿಶೇಷತೆಯ ಭಕ್ಷ-ಭೋಜನಗಳ ಆಯೋಜನೆ ಮಾತ್ರವಲ್ಲದೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು ವಿಶೇಷವಾಗಿತ್ತು.

ಮದ್ದು ಪಾಯಸ, ಮದ್ದ್‍ಪುಟ್ಟ್ ನೊಂದಿಗೆ ಪಾಪುಟ್ಟ್-ಕೋಳಿಕರಿ, ಕಡ್‍ಂಬುಟ್ಟ್ ಪಂದಿಕರಿ, ಕಾಡು ಮಾವಿನ ಸಾರು, ಕೈಹುಳಿ ಚಟ್ನಿ, ವಿವಿಧ ಬಗೆಯ ಉಪ್ಪಿನಕಾಯಿ ಯನ್ನು ಪೊಮ್ಮಕ್ಕಡ ಕೂಟದ ಸದಸ್ಯರು ಮನೆಗಳಲ್ಲಿ ತಯಾರಿಸಿ ತಂದಿದ್ದರು.

ಇದರೊಂದಿಗೆ ಕೊಡವ ಒಡ್‍ಪಗಾದೆ, ರಸಪ್ರಶ್ನೆ, ಅಂತ್ಯಾಕ್ಷರಿ ಹಾಗೂ ಕೊಡವ ಸಂಸ್ಕøತಿಯಲ್ಲಿ ಬರುವ ವಿಶೇಷತೆಗಳ ಬಗ್ಗೆ ವಿವರಿಸಿ ಹೇಳುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪೊಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆ ಮೂವೆರ ರೇಖಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಕಾರ್ಯದರ್ಶಿ ಮಂಡೀರ ರಾಜಪ್ಪ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ, ನಿರ್ದೇಶಕರುಗಳಾದ ಕಾಟುಮಣಿಯಂಡ ಉಮೇಶ್, ಕೊಂಡ್ಯೋಳಂಡ ವಿಶು, ಬೊಳ್ಳಿಯಂಡ ಹರೀಶ್, ಚೋಕಿರ ಸಜಿತ್, ಚೇನಂಡ ಗಿರೀಶ್, ಪಾಡಯಂಡ ಕಟ್ಟಿ, ಸ್ಥಳೀಯರಾದ ಅಜ್ಜೇಟಿರ ಶಂಭು ಪಳಂಗಪ್ಪ ಪಾಲ್ಗೊಂಡಿದ್ದರು.

ಕೊಡವ ಸಮಾಜದ ಮಹಿಳಾ ನಿರ್ದೇಶಕರಾದ ಬಿದ್ದಂಡ ಉಷಾ ದೇವಮ್ಮ, ಅಜ್ಜೇಟಿರ ರಾಣಿ, ಕುಲ್ಲೇಟಿರ ಹೇಮಾ, ಕೋಟೆರ ನೈಲಾ ಸೇರಿದಂತೆ ಪೊಮ್ಮಕ್ಕಡ ಪರಿಷತ್‍ನ ಸದಸ್ಯರು ಭಾಗಿಗಳಾಗಿದ್ದರು. ಸಭಾ ಕಾರ್ಯಕ್ರಮ ಹಾಗೂ ಸ್ಪರ್ಧೆಗಳ ಬಳಿಕ ಕಕ್ಕಡದ ವಿಶೇಷ ತಿನಿಸುಗಳನ್ನು ಸವಿಯಲಾಯಿತು. ಕೊಡವ ಸಂಸ್ಕøತಿಯ ಹಿಂದಿನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ರಮೇಶ್ ಚಂಗಪ್ಪ ಅವರು ಕರೆ ನೀಡಿದರು.