ಶ್ರೀಮಂಗಲ, ಆ. 7: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೇಗೂರು ಗ್ರಾಮದ ಪಟ್ಟಕೇರಿ ಅಂಬಲ ಒಕ್ಕೂಟದಿಂದ ಮೂರನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ಬೈರಂಡ ಮೀಟಿ ಮುತ್ತಪ್ಪ ಅವರ ಗದ್ದೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಕಾಕಮಾಡ ಗಂಗಾ ಚಂಗಪ್ಪ ಉದ್ಘಾಟಿಸಿದರು. ಕೆಸರು ಗದ್ದೆ ಕ್ರೀಡಾಕೂಟದ ಪ್ರಯುಕ್ತ ವಿವಿಧ ಪೈಪೋಟಿಯನ್ನು ಏರ್ಪಡಿಸಲಾಗಿತ್ತು. ಕೆಸರು ಗದ್ದೆ ಓಟ, ವಿಷದ ಚೆಂಡು, ಹಗ್ಗಜಗ್ಗಾಟ, ಕಾಲ್ಚೆಂಡು ಇತ್ಯಾದಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು ವಿಭಾಗ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ವಿಭಾಗ ಅಲ್ಲದೆ ವಿಶೇಷವಾಗಿ ಕಾರ್ಮಿಕರಿಗೂ ಸಹ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ವಿವಿಧ ವಿಭಾಗದಲ್ಲಿ ಸ್ಪರ್ಧಾಳುಗಳು ಕೆಸರಿನಲ್ಲಿ ಬಿದ್ದು-ಎದ್ದು ತಮ್ಮ ಪೈಪೋಟಿಯಲ್ಲಿ ಮುನ್ನಡೆಗಳಿಸಲು ಉತ್ಸಾಹದಿಂದ ಪಾಲ್ಗೊಂಡಿದ್ದರು. ಪ್ರಗತಿಪರ ಕೃಷಿಕ ಮತ್ರಂಡ ಬೋಸು ಬೆಳ್ಯಪ್ಪ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಮತ್ರಂಡ ರಾಜ ಮುತ್ತಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆಗಾಲದಲ್ಲಿ ಯಾವದೇ ಮನೋರಂಜನೆ ಕಾರ್ಯಕ್ರಮ ಗ್ರಾಮೀಣ ಭಾಗದಲ್ಲಿ ಇಲ್ಲದೆ ಇರುವದರಿಂದ ನಾಟಿ ಗದ್ದೆಗಳಲ್ಲಿ ಅನಾದಿಕಾಲದಿಂದಲೂ ನಾಟಿ ಓಟ, ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿತ್ತು. ಈಗ ಅದನ್ನು ಕೆಸರು ಗದ್ದೆ ಕ್ರೀಡಾಕೂಟವೆಂದು ಕರೆಯುತ್ತೇವೆ. ನಾಟಿ ಸಮಯದಲ್ಲಿ ಮನೋರಂಜನೆಗಾಗಿ ಈ ಕ್ರೀಡಾ ಕೂಟವನ್ನು ಕಳೆದ ಮೂರು ವರ್ಷದಿಂದ ನಡೆಸಲಾಗುತ್ತಿದೆ. ಪಟ್ಟಕೇರಿ ಅಂಬಲ ಒಕ್ಕೂಟದ ವ್ಯಾಪ್ತಿಗೆ 33 ಕುಟುಂಬಗಳು ಒಳಪಡುತ್ತಿದ್ದು, ಮುಖ್ಯವಾಗಿ ಗ್ರಾಮದಲ್ಲಿ ಯಾವದೇ ಕೆಟ್ಟ ವ್ಯವಹಾರ ನಡೆಯದಂತೆ ಗ್ರಾಮದ ಹಿತಕಾಪಾಡುವ ನಿಟ್ಟಿನಲ್ಲಿ ಈ ಒಕ್ಕೂಟ ಸ್ಥಾಪಿಸಲಾಯಿತು. ಪ್ರತೀ ಕುಟುಂಬದ ಕಷ್ಟ-ಸುಖಕ್ಕೆ ಸ್ಪಂದಿಸುವದು, ಶಾಲಾ ಮಕ್ಕಳಿಗೆ ಪ್ರೋತ್ಸಾಹ, ಗ್ರಾಮದ ರಸ್ತೆ ದುರಸ್ತಿಗಳಿಗೆ ಒಕ್ಕೂಟ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಬೆಳೆಗಾರ ಕಾಕಮಾಡ ಕರ್ಣ ಉತ್ತಪ್ಪ ಭಾಗವಹಿಸಿದ್ದರು.