ಕುಶಾಲನಗರ, ಆ. 6: ಕೊಡಗಿನ ಪ್ರಮುಖ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಯುವ ಜನಾಂಗಕ್ಕೆ ಅರಿವು ಮೂಡಿಸುವದು ಸಂಘ-ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್‍ಕುಮಾರ್ ತಿಳಿಸಿದ್ದಾರೆ.

ಕುಶಾಲನಗರ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ ಹಾಗೂ ಗೌಡ ಮಹಿಳಾ ಸ್ವಸಹಾಯ ಸಂಘದ ಆಶ್ರಯದಲ್ಲಿ ಗೌಡ ಸಮಾಜದ ಆವರಣದಲ್ಲಿ ಹಮ್ಮಿಕೊಂಡಿದ್ದ ಆಟಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸಂಸ್ಕಾರ, ಆಚಾರ ವಿಚಾರಗಳ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು.

ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪಟ್ಟಂದಿ ಬೀನಾ ಸೀತಾರಾಂ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಕೇಚಪ್ಪನ ಪ್ರಮೀಳಾ ಮೋಹನ್, ಯುವಕ ಸಂಘದ ಅಧ್ಯಕ್ಷ ಪಂಜಿಪಳ್ಳ ಯತೀಶ್, ಉಪಾಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಮಾದಪ್ಪ, ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಸೂದನ ಗೋಪಾಲ್, ಪ್ರಮುಖರಾದ ಕೂರನ ದರ್ಶನ್ ಮತ್ತಿತರರು ಇದ್ದರು.

ಕಾರ್ಯಕ್ರಮದ ಅಂಗವಾಗಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಆಟಿ ಸೊಪ್ಪಿನಿಂದ ತಯಾರಿಸಿದ ವಿವಿಧ ರೀತಿಯ ಭಕ್ಷ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಆಟಿ ಪಾಯಸ, ಹಲ್ವ, ಕಣಲೆ ಪಲ್ಯ, ಸಾರು, ಕಕ್ಕಡ ಊತಪ್ಪಂ, ಏಡಿ ಫ್ರೈ, ವಿವಿಧ ರೀತಿಯ ಸಿಹಿ ತಿಂಡಿಗಳು, ರೊಟ್ಟಿ, ನೀರುದೋಸೆ, ಇಡ್ಲಿ, ನಾಟಿ ಕೋಳಿ ಸಾರು, ಕೆಸುವಿನ ಪತ್ರೊಡೆ, ಕಡುಬು, ಪುಳಿ ಮುಂಚಿ ಮೊದಲಾದ ಭಕ್ಷ್ಯಗಳು ಗಮನ ಸೆಳೆದವು.