ಸಿದ್ದಾಪುರ, ಆ. 6: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಿದ್ದಾಪುರ ಗ್ರಾ.ಪಂ.ಯ ಕಸ ಸುರಿಯಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ಗ್ರಾಮ ಸಭೆಯಲ್ಲಿ ನಡೆಯಿತು.

ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಣಿ ಹಾಗೂ ನೋಡಲ್ ಅಧಿಕಾರಿ ಅಂಕಯ್ಯ ಅವರ ಸಮ್ಮುಖದಲ್ಲಿ ನಡೆದ ಗ್ರಾಮಸಭೆಯಲ್ಲಿ ಪ್ರಮುಖರು ಮಾತನಾಡಿ ಯಾವದೇ ಕಾರಣಕ್ಕೂ ಸಿದ್ದಾಪುರ ಗ್ರಾಮ ಪಂಚಾಯಿತಿ ಕಸವನ್ನು ಸುರಿಯಲು ಮಾಲ್ದಾರೆ ವ್ಯಾಪ್ತಿಯಲ್ಲಿ ಜಾಗ ನೀಡಕೂಡದು; ಈಗಾಗಲೇ ಗುರುತಿಸಿರುವ ಜಾಗವನ್ನು ತಡೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಗಳಿಗೆ ಕಳಿಸುವಂತೆ ಮನವಿ ಮಾಡಿದ ಅವರು; ತ್ಯಾಜ್ಯ ಸುರಿಯಲು ಮುಂದಾದರೆ ಗ್ರಾಮಸ್ಥರೆಲ್ಲರೂ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

ಈ ಭಾಗದಲ್ಲಿ ನೂರಾರು ಕಾರ್ಮಿಕ ಕುಟುಂಬಗಳು ನಿವೇಶನ ರಹಿತರಾಗಿದ್ದಾರೆ .ಮಾಲ್ದಾರೆ ವ್ಯಾಪ್ತಿಯಲ್ಲಿರುವ ಪೈಸಾರಿ ಜಾಗವನ್ನು ಸಿದ್ದಾಪುರ ಹಾಗೂ ಇತರ ಪಂಚಾಯಿತಿಗಳಿಗೆ ನೀಡದಂತೆ ತಡೆಹಿಡಿಯಬೇಕು ಹಾಗೂ ಸಿದ್ದಾಪುರ ಕಸ ಸುರಿಯಲು ನಿಗದಿಪಡಿಸಿರುವ ಸ್ಥಳದಲ್ಲಿ ತೋಡು ಹರಿಯುತ್ತಿದ್ದು, ಸಮೀಪದಲ್ಲೇ ಶಾಲೆಯೂ ಇದೆ. ಆಯಾ ಗ್ರಾ.ಪಂ.ಗಳಲ್ಲಿ ಸಾಕಷ್ಟು ಪೈಸಾರಿ ಜಾಗವಿದ್ದು, ಅದನ್ನು ಬಿಡಿಸಿ ಅಲ್ಲಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವದೇ ಕಾರಣಕ್ಕೂ ಮಾಲ್ದಾರೆ ಪಂಚಾಯಿತಿ ಯಿಂದ ಜಾಗ ನೀಡಬಾರದು ಎಂದು ಆಗ್ರಹಿಸಿದರು.

ಗ್ರಾಮದ ಮಿಟ್ಟು ನಂಜಪ್ಪ ಮಾತನಾಡಿ; ಈ ಭಾಗದಲ್ಲಿ ಕಾಡಾನೆ, ಹುಲಿ ಸಮಸ್ಯೆಗಳಿದ್ದು ಶಾಶ್ವತ ಯೋಜನೆಗಳನ್ನು ರೂಪಿಸಿ ಕಾಡು ಪ್ರಾಣಿಗಳು ನಾಡಿಗೆ ಬಾರದಂತೆ ತಡೆಯಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.

ಅರಣ್ಯದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಕುಡಿಯುವ ನೀರು, ರಸ್ತೆ, ಮನೆ ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ತಡೆ ಮಾಡದಂತೆ ಹಾಡಿಯ ಅಭಿವೃದ್ಧಿಗೆ ಸಹಕರಿಸಬೇಕೆಂದರು.

ಗಿರಿಜನ ಹಾಡಿಗಳಲ್ಲಿ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿದ್ದು, ವಿದ್ಯುತ್ ಸಂಪರ್ಕ ಇಲ್ಲದೆ ಮತ್ತೆ ನೀರಿನ ಸಮಸ್ಯೆ ಎದುರಾಗಿದೆ; ಕೂಡಲೇ ಸಂಪರ್ಕ ಕಲ್ಪಿಸಿಕೊಡಬೇಕೆಂದು ಹಾಡಿಯ ನಿವಾಸಿ ಸಂಜೀವ ಜೆಸ್ಕಾಂ ಇಲಾಖೆಯನ್ನು ಒತ್ತಾಯಿಸಿದರು.

ಈ ಸಂದರ್ಭ ಚೆಸ್ಕಾಂ ಅಧಿಕಾರಿ ಅಂಕಯ್ಯ ಮಾತನಾಡಿ ಅರಣ್ಯ ಇಲಾಖೆ ತಡೆ ಇರುವದರಿಂದ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ವಲಯ ಅರಣ್ಯಾಧಿಕಾರಿ ಮಂಜುನಾಥ್ ಮಾಹಿತಿ ನೀಡಿ ಕುಡಿಯುವ ನೀರಿನ ಯೋಜನೆಗೆ ಯಾವದೇ ಅಡ್ಡಿ ಇಲ್ಲ; ಅರಣ್ಯದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿದರೆ ಪ್ರಾಣಿಗಳಿಗೆ ಅಪಾಯ ವಾಗಿರುವದರಿಂದ ಭೂಮಿಯೊಳ ಗಿಂದ ವಿದ್ಯುತ್ ಸಂಪರ್ಕ ನೀಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದರು.

ಬಾಡಗ ಬಾಣಂಗಾಲ ಚೌಡಿ ಮಠ ಗ್ರಾಮದಲ್ಲಿ ಸೂಕ್ತ ರಸ್ತೆ ಇಲ್ಲದೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಮೂಲಕ ರಸ್ತೆ ಅಭಿವೃದ್ಧಿಪಡಿಸಿ ಕೊಡಬೇಕೆಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದರು.

ಆಹಾರ ಇಲಾಖೆಯು ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡು ತ್ತಿರುವ ಅಕ್ಕಿಯನ್ನು ಕೊಂಡುಕೊಳ್ಳಲು ಬೆರಳಚ್ಚು (ತಂಬ್) ನೀಡಬೇಕಾಗಿರು ವದರಿಂದ ಹಲವು ಸಮಸ್ಯೆಗಳು ಎದುರಾಗಿದೆ. ವ್ಯವಸ್ಥೆಯನ್ನು ಹಿಂತೆಗೆ ದುಕೊಂಡು ಆಹಾರ ಪದಾರ್ಥಗಳನ್ನು ಯಾವದೇ ಸಮಸ್ಯೆಯಿಲ್ಲದೆ ವಿತರಣೆ ಮಾಡಬೇಕೆಂದು ಆಹಾರ ಇಲಾಖೆ ಅಧಿಕಾರಿಯನ್ನು ಒತ್ತಾಯಿಸಿದರು.

ಹುಂಡಿ ಗ್ರಾಮದಲ್ಲಿ ಮನೆಯ ಮೇಲೆ ಭಾರೀ ಗಾತ್ರದ ಮರ ಬೀಳುವ ಸ್ಥಿತಿಯಲ್ಲಿದ್ದು, ಅದನ್ನು ತೆರವುಗೊಳಿಸಿ ಕೊಡಬೇಕೆಂದು ಹಮೀದ್ ಒತ್ತಾಯಿಸಿದರು.

ಮಾಲ್ದಾರೆ ಗ್ರಾಮದಲ್ಲಿರುವ ಜನಪರ ಸಂಘಟನೆಯ ಯುವಕರ ತಂಡ ಶುಚಿತ್ವ ಪರಿಸರ, ಬಸ್ ತಂಗುದಾಣ ದುರಸ್ತಿ ಕಾರ್ಯ ಸೇರಿದಂತೆ ಹಲವು ಸಾಮಾಜಿಕ ಕಳಕಳಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು; ಗ್ರಾಮ ಪಂಚಾಯಿತಿ ಪರವಾಗಿ ಅಭಿವೃದ್ಧಿ ಅಧಿಕಾರಿ ಅಭಿನಂದಿಸಿದರು.

ಗ್ರಾಮ ಪಂಚಾಯಿತಿ ಮೂಲಕ ಇಂಗುಗುಂಡಿ ನೀಡುವ ಯೋಜನೆ ಇದ್ದು, ಎಲ್ಲರೂ ಸದುಪಯೋಗ ಪಡಿಸಿಕೊಂಡು ಗ್ರಾಮದ ಆಸುಪಾಸು ಶುಚಿತ್ವ ಕಾಪಾಡಿಕೊಂಡು ಗ್ರಾಮ ಪಂಚಾಯಿತಿಯೊಂದಿಗೆ ಸಹಕರಿಸ ಬೇಕೆಂದು ಮನವಿ ಮಾಡಿದರು

ಮಾಲ್ದಾರೆ, ಬಾಡಗ ಬಾಣಂಗಾಲ ಸೇರಿದಂತೆ ಹಲವೆಡೆ ವಿದ್ಯುತ್ ಕಂಬಗಳು ಅಪಾಯದಂಚಿನಲ್ಲಿದ್ದು, ಅದನ್ನು ಸರಿಪಡಿಸಬೇಕೆಂದು ಸ್ಥಳೀಯರು ಒತ್ತಾಯ ಮಾಡಿದರು.

ವಿವಿಧ ಇಲಾಖಾ ಅಧಿಕಾರಿಗಳು ಇಲಾಖೆಗಳಲ್ಲಿ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿ ಸದಸ್ಯೆ ಚಿನ್ನಮ್ಮ ಮಾತನಾಡಿ, ತಾಲೂಕು ಪಂಚಾಯಿತಿ ಯೋಜನೆಗಳಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡಲಾಗಿದ್ದು, ಮತ್ತಷ್ಟು ಯೋಜನೆಗಳ ಮೂಲಕ ಗ್ರಾಮ ಅಭಿವೃದ್ಧಿ ಪಡಿಸಲಾಗುವದು ಎಂದರು.

ತಾ.ಪಂ. ಸದಸ್ಯೆ ಕಾವೇರಿ, ಜಿ.ಪಂ. ಸದಸ್ಯೆ ಲೀಲಾವತಿ ಸಭೆಗೆ ಗೈರು ಹಾಜರಾಗಿದ್ದರಿಂದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು

ಈ ಸಂದರ್ಭ ಗ್ರಾಮದ ಪ್ರಮುಖ ವಿಜು ಬಿದ್ದಪ್ಪ, ಮಾಜಿ ತಾ.ಪಂ. ಸದಸ್ಯ ಹಂಸ, ಗ್ರಾ.ಪಂ. ಉಪಾಧ್ಯಕ್ಷ ರಾಜಾ, ಸದಸ್ಯರುಗಳಾದ ಸಜಿ ಥೋಮಸ್, ಉಮೇಶ, ಮುತ್ತಪ್ಪ, ಕರುಂಬಯ್ಯ, ಸತೀಶ್, ರುದ್ರಪ್ಪ, ನಿಯಾಜ್, ಪದ್ಮಾ, ಲಲಿತಾ, ಪವಿತ್ರಾ, ಇಂದಿರಾ, ಬಿಲ್ ಕಲೆಕ್ಟರ್ ನಂದ, ಲೆಕ್ಕ ಸಹಾಯಕ ಲಿಂಗರಾಜ್, ಕಾರ್ಯದರ್ಶಿ ಸಫೀಕ್, ಸೇರಿದಂತೆ ಮತ್ತಿತರರು ಇದ್ದರು.