ಕೂಡಿಗೆ, ಆ. 6 : ಕೂಡಿಗೆ ಗ್ರಾಮ ಪಂಚಾಯ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿಯ ಬಸವನಹಳ್ಳಿ ಗ್ರಾಮದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ 250 ಮನೆಗಳನ್ನು ಈ ತಿಂಗಳ ಅಂತ್ಯದೊಳಗೆ ಆದಿವಾಸಿಗಳಿಗೆ ಹಸ್ತಾಂತರಿಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೂಡಿಗೆಯ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತಿದೆ. ಅಲ್ಲದೆ, ಬ್ಯಾಡಗೊಟ್ಟ ಗ್ರಾಮದಲ್ಲಿ 350 ಮನೆಗಳು ಮತ್ತು ಬಸವನಹಳ್ಳಿಯಲ್ಲಿ 207 ಮನೆಗಳ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಈಗಾಗಲೇ ಎರಡೂ ಗ್ರಾಮಗಳಲ್ಲಿಯೂ ಒಟ್ಟು 250 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಆದಿವಾಸಿಗಳಿಗೆ ಹಸ್ತಾಂತರಿಸಲು ಸಿದ್ಧಗೊಂಡಿವೆ.
ಸಂಬಂಧಪಟ್ಟ ಇಲಾಖೆಯವರು ಇನ್ನುಳಿದ ಮನೆಗಳ ಕಾಮಗಾರಿಯ ಬಗ್ಗೆ ಹೆಚ್ಚು ನಿಗಾ ವಹಿಸುವದರ ಮೂಲಕ ಯಾವದೇ ಹಂತದಲ್ಲೂ ಕಳಪೆ ಕಾಮಗಾರಿಯನ್ನು ನಡೆಸದೆ, ಸರ್ಕಾರ ಟೆಂಡರ್ ನೀಡುವಾಗ ಸೂಚನೆ ನೀಡಿರುವಂತೆ ಕಾಮಗಾರಿ ನಡೆಸಬೇಕು ಎಂದರು. ಜಿಲ್ಲಾ ಮಟ್ಟದ ಅಧಿಕಾರಿಗಳು ತಿಂಗಳಿಗೊಮ್ಮೆ ಈ ಕೇಂದ್ರಕ್ಕೆ ಭೇಟಿನೀಡಿ ಪರಿಶೀಲನೆ ಮಾಡುವದರ ಮೂಲಕ ಆದಿವಾಸಿ ಕುಟುಂಬಗಳಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.