ಸೋಮವಾರಪೇಟೆ,ಆ.6: ಇಲ್ಲಿನ ಪಟ್ಟಣ ಪಂಚಾಯಿತಿಗೆ ಚುನಾವಣಾ ದಿನಾಂಕ ನಿಗದಿಯಾಗಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಭಾರತೀಯ ಜನತಾ ಪಾರ್ಟಿಯ ಪ್ರಮುಖರು ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದರು.
ಇಲ್ಲಿನ ಕೊಡವ ಸಮಾಜದಲ್ಲಿ ನಡೆದ ಆಕಾಂಕ್ಷಿಗಳು ಮತ್ತು ಪಕ್ಷದ ಮುಖಂಡರ ಸಭೆಯಲ್ಲಿ ಚುನಾವಣೆ ಎದುರಿಸುವ ಬಗ್ಗೆ ಚರ್ಚಿಸಲಾಯಿತು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಬಿ.ಡಿ. ಮಂಜುನಾಥ್, ಕುಮಾರಪ್ಪ, ವಿ.ಕೆ. ಲೋಕೇಶ್, ಮನುಕುಮಾರ್ ರೈ ಸೇರಿದಂತೆ ಇತರ ಪ್ರಮುಖರು ಹಾಜರಿದ್ದ ಸಭೆಯಲ್ಲಿ, ಪಟ್ಟಣದ 11 ವಾರ್ಡ್ಗಳಿಗೆ ಸಂಬಂಧಿಸಿದಂತೆ ಒಟ್ಟು 39 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದರು.
2 ವಾರ್ಡ್ಗಳಿಗೆ ತಲಾ ಓರ್ವರು ಆಕಾಂಕ್ಷಿಗಳಿದ್ದರೆ ಉಳಿದಂತೆ 9 ವಾರ್ಡ್ಗಳಿಗೆ ಒಂದಕ್ಕಿಂತ ಅಧಿಕ ಅರ್ಜಿಗಳು ಸಲ್ಲಿಕೆಯಾದವು. ಹಾಲಿ ಸದಸ್ಯರಾಗಿರುವ ಈರ್ವರನ್ನು ಹೊರತುಪಡಿಸಿ ಉಳಿದವರು ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದರು.
ಆಕಾಂಕ್ಷಿಗಳ ಅರ್ಜಿಗಳನ್ನು ಸ್ವೀಕರಿಸಿದ ಬಿಜೆಪಿ ಪ್ರಮುಖರು, ಪಕ್ಷದ ಮುಖಂಡರು ಟಿಕೆಟ್ ಅಂತಿಮಗೊಳಿಸಲಿದ್ದು, ಯಾರಿಗೇ ಟಿಕೆಟ್ ಫೈನಲ್ ಆದರೂ ಸಹ ಉಳಿದವರು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ ಪಕ್ಷದ ಗೆಲುವಿಗೆ ಸಹಕರಿಸಬೇಕು ಎಂದು ನಿರ್ದೇಶನ ನೀಡಿರುವದಾಗಿ ಪಕ್ಷದ ಮೂಲಗಳು ತಿಳಿಸಿವೆ.