ಕೂಡಿಗೆ, ಆ. 6: ವಿಜ್ಞಾನ ಶಿಕ್ಷಕರು ಹೊಸ ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳಿಗೆ ವಿಜ್ಞಾನದ ವಿಷಯದಲ್ಲಿ ಆಸಕ್ತಿ ಬೆಳೆಸಿ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು ಎಂದು ಕೂಡಿಗೆ (ಡಯಟ್) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಾಲ್ಟರ್ ಹಿಲರಿ ಡಿಮೆಲ್ಲೊ ಹೇಳಿದರು. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಕೂಡಿಗೆ ಡಯಟ್ ವತಿಯಿಂದ ಇಲ್ಲಿನ ಆವರಣದಲ್ಲಿ 10ನೇ ತರಗತಿ ವಿಜ್ಞಾನ ಎನ್.ಸಿ.ಇ.ಆರ್.ಡಿ. ಪಠ್ಯ ಪುಸ್ತಕದ ಕುರಿತು ಜಿಲ್ಲಾ ವಿಜ್ಞಾನ ಶಿಕ್ಷಕರಿಗೆ 5 ದಿನಗಳವರೆಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಶಾಲೆಯ ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.