ಕುಶಾಲನಗರ, ಆ. 6: ದುಬಾರೆ ಪ್ರವಾಸಿ ಕೇಂದ್ರದಲ್ಲಿ ರ್ಯಾಫ್ಟಿಂಗ್ ಕ್ರೀಡೆ ಪ್ರಾರಂಭಕ್ಕೆ ಮತ್ತೆ ಕಂಟಕ ಎದುರಾಗಿದೆ. ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಮೌಖಿಕ ಸೂಚನೆ ನೀಡಿದರೂ ರ್ಯಾಫ್ಟಿಂಗ್ ಮಾಲೀಕರ ನಡುವೆ ಗೊಂದಲ ಕಾರಣಗಳಿಂದ ಭಾನುವಾರ ಪ್ರಾರಂಭಗೊಳ್ಳಬೇಕಿದ್ದ ರ್ಯಾಫ್ಟಿಂಗ್ ಮತ್ತೆ ಮುಂದೂಡಲ್ಪಟ್ಟಿದೆ.

ಏಪ್ರಿಲ್ 28 ರಂದು ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ರ್ಯಾಫ್ಟಿಂಗ್ ಮಾಲೀಕರಾದ ಮುರಳಿ ಮಾದಯ್ಯ ಎಂಬವರು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿತ್ತು. ಇನ್ನೊಂದೆಡೆ ರ್ಯಾಫ್ಟಿಂಗ್ ಮಾಲೀಕರು ಸಭೆ ಸೇರಿ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ಕೂಡ ವಿಫಲರಾಗಿರುವದು ಮುಂದೂಡಿಕೆಗೆ ಕಾರಣವಾಗಿದೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚನೆಗೊಂಡ ರ್ಯಾಫ್ಟಿಂಗ್ ಮೇಲುಸ್ತುವಾರಿ ಸಮಿತಿ ಸಭೆ ಕರೆಯಲು ಕೂಡ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಯಾವದೇ ನಿರ್ಧಾರಕ್ಕೆ ಬರಲು ಅಸಾಧ್ಯವಾಗಿದೆ ಎನ್ನುವ ಮಾಹಿತಿಗಳು ಹೊರಬಿದ್ದಿದೆ. ಉಸ್ತುವಾರಿ ಸಚಿವರು ರ್ಯಾಫ್ಟಿಂಗ್ ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ ಬೆನ್ನಲ್ಲೇ ದುಬಾರೆ, ತೆಪ್ಪದಕಂಡಿ, ಬಾಳುಗೋಡು ವ್ಯಾಪ್ತಿಯ ರ್ಯಾಫ್ಟಿಂಗ್ ಮಾಲೀಕರು ಸಭೆ ಕರೆದು ತಕ್ಷಣ ರ್ಯಾಫ್ಟಿಂಗ್ ಪ್ರಾರಂಭಿಸಲು ನಿರ್ಧಾರ ಕೈಗೊಂಡಿದ್ದರು. ಓರ್ವ ಮಾಲೀಕ ತಲಾ ಎರಡು ರ್ಯಾಫ್ಟರ್‍ಗಳಂತೆ ದುಬಾರೆಯಲ್ಲಿ ರ್ಯಾಫ್ಟರ್‍ಗಳನ್ನು ನದಿಗಿಳಿಸಲು ಮಾಲೀಕರು ಒಪ್ಪಿಕೊಂಡಿದ್ದರು. ಆದರೆ ಮುರಳಿ ಮಾದಯ್ಯ ಅವರು ಹೆಚ್ಚುವರಿ ರ್ಯಾಫ್ಟರ್‍ಗಳ ಬೇಡಿಕೆ ಇಟ್ಟಿರುವ ಹಿನ್ನಲೆಯಲ್ಲಿ ಮಾಲೀಕರ ನಡುವೆ ಗೊಂದಲ ಸೃಷ್ಟಿಯಾಗಿದೆ. ಈ ನಡುವೆ ರ್ಯಾಫ್ಟರ್ ಮಾಲೀಕರಿಗೆ ಸ್ಥಳೀಯ ಪಂಚಾಯಿತಿ ಯಾವದೇ ರೀತಿಯ ಆಕ್ಷೇಪಣಾ ರಹಿತ ಪತ್ರ ನೀಡಿರುವದಿಲ್ಲ ಎಂದು ನಂಜರಾಯಪಟ್ಟಣ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಲ್ಪ ಸ್ಪಷ್ಟಪಡಿಸಿದ್ದಾರೆ.

ರ್ಯಾಫ್ಟಿಂಗ್ ನಡೆಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚನೆಯಾಗಿರುವ ಹಿನ್ನೆಲೆಯಲ್ಲಿ ತಮಗೆ ಎನ್‍ಒಸಿ ನೀಡಲು ಯಾವದೇ ಸೂಚನೆ ಬಂದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಕಾವೇರಿ ನದಿ ಮಧ್ಯಭಾಗ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಡುವ ಕಾರಣ ಅರಣ್ಯ ಇಲಾಖೆ ಕೂಡ ಆಕ್ಷೇಪಣಾ ರಹಿತ ಪತ್ರ ನೀಡಲು ಅಸಾಧ್ಯ ಎನ್ನುತ್ತಾರೆ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ.

ಫೆ.14 ರಿಂದ ಇದುವರೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ರ್ಯಾಫ್ಟಿಂಗ್ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ ವಂಚಿತರಾಗುತ್ತಿದ್ದು ಇನ್ನೊಂದೆಡೆ ನೂರಾರು ಸಂಖ್ಯೆಯ ಕಾರ್ಮಿಕರು ಉದ್ಯೋಗ ವಂಚಿತರಾಗಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮದ ಹೃದಯ ಭಾಗವಾಗಿರುವ ದುಬಾರೆಯಲ್ಲಿ ರ್ಯಾಫ್ಟಿಂಗ್ ರದ್ದುಗೊಂಡ ಬೆನ್ನಲ್ಲೇ ಪ್ರವಾಸೋದ್ಯಮ ಬಹುತೇಕ ನಷ್ಟಕ್ಕೆ ಒಳಗಾಗಿದೆ ಎನ್ನುತ್ತಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಪ್ರಮುಖರಾದ ಕೆ.ಎಸ್.ರತೀಶ್. ಆದಷ್ಟು ಬೇಗನೆ ಪ್ರಾರಂಭಿಸಿದಲ್ಲಿ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎನ್ನುವ ಆಶಾ ಭಾವನೆ ಅವರದ್ದು.

ಕಳೆದ 6 ತಿಂಗಳಿನಿಂದ ಕಾರ್ಮಿಕರ ಸಂಬಳ, ಭತ್ಯೆ, ಬಾಡಿಗೆ ಇತರೆ ಸೇರಿದಂತೆ ದಿನನಿತ್ಯ 10 ಸಾವಿರ ರೂ.ಗಳಂತೆ ಇದುವರೆಗೆ ಲಕ್ಷಾಂತರ ರೂ.ಗಳ ನಷ್ಟಕ್ಕೆ ಹೊಟೇಲ್ ಉದ್ಯಮ ಒಳಗಾಗಿದೆ ಎನ್ನುತ್ತಾರೆ ದುಬಾರೆ ಇನ್ ಹೋಟೆಲ್ ವ್ಯವಸ್ಥಾಪಕರಾದ ಪ್ರಶಾಂತ್ ಶೆಣೈ. ವಿಧಾನಸಭಾ ಚುನಾವಣೆ ಜೊತೆಗೆ ದುಬಾರೆಗೆ ಸಂಪರ್ಕ ರಸ್ತೆ ಕಾಮಗಾರಿ, ಅಲ್ಲದೆ ರ್ಯಾಫ್ಟಿಂಗ್ ಕ್ರೀಡೆ ರದ್ದು ಈ ಮೂಲಕ ಇಡೀ ಉದ್ಯಮಕ್ಕೆ ಭಾರೀ ತೊಂದರೆ ಉಂಟಾಗಿದೆ. ಪ್ರವಾಸಿಗರು ಕಾಟೆಜ್, ಹೋಂಸ್ಟೇ ಬುಕ್ಕಿಂಗ್ ರದ್ದುಗೊಳಿಸುತ್ತಿದ್ದು ಸಮಸ್ಯೆಗೆ ಪರಿಹಾರ ಕೂಡಲೆ ದೊರಕಬೇಕು ಎನ್ನುವದು ಶೆಣೈ ಅವರ ಮಾತು.

75 ಕ್ಕೂ ಅಧಿಕ ರ್ಯಾಫ್ಟಿಂಗ್ ಗೈಡ್‍ಗಳು 6 ತಿಂಗಳಿನಿಂದ ಕೆಲಸವಿಲ್ಲದೆ ಪರದಾಡುವಂತಹ ಸ್ಥಿತಿ ಎದುರಾಗಿದೆ ಎಂದು ಗೈಡ್ ಅಸೋಸಿಯೇಷನ್ ಅಧ್ಯಕ್ಷರಾದ ಮನೇಶ್ ಅವರ ಅಳಲಾಗಿದೆ. ತಾನು 9 ವರ್ಷದಿಂದ ಗೈಡ್ ಕೆಲಸ ನಿರ್ವಹಿಸುತ್ತಿದ್ದೇನೆ. ಇದೀಗ ಕೆಲಸವಿಲ್ಲದೆ ಸಂಸಾರ ನಡೆಸುವದು ಕಷ್ಟ ಎಂದಿದ್ದಾರೆ. ಪ್ರವಾಸಿಗರು ಕೂಡ ರ್ಯಾಫ್ಟಿಂಗ್ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಬಂದು ಪೆಚ್ಚು ಮೋರೆ ಹಾಕಿ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಒಟ್ಟಾರೆ ಆದಷ್ಟು ಬೇಗ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ಮತ್ತೆ ಪುನರಾರಂಭಗೊಂಡಲ್ಲಿ ಕಳೆದ ಕೆಲವು ತಿಂಗಳಿನಿಂದ ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎನ್ನುವದು ಈ ಭಾಗದ ನಾಗರೀಕರ ಆಶಯವಾಗಿದೆ.