ಸೋಮವಾರಪೇಟೆ, ಆ. 5: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಗೆ ಕೃಷಿ ಸಂಪೂರ್ಣ ನೆಲಕಚ್ಚಿದ್ದು, ವಾಸ್ತವ ವರದಿ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಹೆಚ್ಚಿನ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಕೃಷಿಕ ಸಮಾಜ ಆಗ್ರಹಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿರುವ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ತಾಕೇರಿ ಪೊನ್ನಪ್ಪ, ಭಾರೀ ಮಳೆಗೆ ಕಾಫಿ, ಕಿತ್ತಳೆ, ಏಲಕ್ಕಿ, ಕರಿಮೆಣಸು, ಬಾಳೆ, ಶುಂಠಿ. ಭತ್ತ, ಜೋಳ ಸೇರಿದಂತೆ ಕೃಷಿ ಬೆಳೆಗಳು ಹಾನಿಗೀಡಾಗಿದ್ದು, ಕೃಷಿಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ತಮ್ಮ ಇಲಾಖಾ ವರದಿಯನ್ನು ತರಿಸಿಕೊಂಡು ಆದಷ್ಟು ಶೀಘ್ರ ಅತೀವೃಷ್ಟಿ ಪರಿಹಾರ ನಿಧಿಯಡಿ ಹೆಚ್ಚಿನ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.