ಗೋಣಿಕೊಪ್ಪಲು, ಆ. 5: ಇಬ್ಬರು ಕಿಡಿಗೇಡಿ ಪ್ರಯಾಣಿಕರಿಂದಾಗಿ ಬೆಂಗಳೂರಿನಿಂದ ನಾಪೋಕ್ಲುವಿಗೆ ತೆರಳಬೇಕಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ಹೊಸೂರು-ಕಳತ್ಮಾಡು ಕಿರಿದಾದ ಸೇತುವೆಯಲ್ಲಿ ಬೆಳಗ್ಗಿನ ಜಾವ 3 ಗಂಟೆಗೆ ಸಿಲುಕಿದ ಘಟನೆ ನಡೆದಿದೆ.
ಬಿಟ್ಟಂಗಾಲ-ವೀರಾಜಪೇಟೆ ಮಾರ್ಗ ತೆರಳಬೇಕಿದ್ದ ಬಸ್ ಕೈಕೇರಿ ಸಮೀಪಿಸುತ್ತಿದ್ದಂತೆ ನಂದನವನ ಜಂಕ್ಷನ್ ಬಳಿ ‘ಬ್ಯಾರಿಕೇಡ್’ ಅಳವಡಿಕೆ ಗಮನಿಸಿ, ಹೊಸೂರು-ಕಳತ್ಮಾಡು ರಸ್ತೆ ಮಾರ್ಗ ತೆರಳುವಂತೆ ಇಬ್ಬರು ಪ್ರಯಾಣಿಕರು ಚಾಲಕನಿಗೆ ಸೂಚಿಸಿದ್ದರೆನ್ನಲಾಗಿದೆ. ಕೇವಲ ಲಘುವಾಹನ ತೆರಳಬೇಕಿದ್ದ ಇಕ್ಕಟ್ಟಾದ ರಸ್ತೆಯಲ್ಲಿ ಸಾಗಿರುವದೇ ಕಿರುಸೇತುವೆಯಲ್ಲಿ ಬಸ್ ಸಿಲುಕಲು ಕಾರಣ ಎನ್ನಲಾಗಿದೆ. ಸುಮಾರು 23 ಪ್ರಯಾಣಿಕರು ನಾಪೋಕ್ಲು ಕಡೆಗೆ ಪ್ರಯಾಣಿಸುತ್ತಿದ್ದು, ದಾರಿ ತಪ್ಪಿಸಿದ ಇಬ್ಬರು ಪ್ರಯಾಣಿಕರು ಪರಾರಿಯಾದರೆನ್ನಲಾಗಿದೆ. ಈ ಹಿಂದೆಯೂ ಇದೇ ರಸ್ತೆ ಮಾರ್ಗ 2 ಸರಕಾರಿ ಬಸ್‍ಗಳು ದಾರಿ ತಪ್ಪಿ ಬಂದಿದ್ದವು ಎನ್ನಲಾಗಿದ್ದು, ಕೂಡಲೇ ಸೇತುವೆ ದುರಸ್ತಿಗೆ ಸ್ಪಂದಿಸಲು ಗ್ರಾ.ಪಂ. ಅಧ್ಯಕ್ಷ ಗೋಪಿ ಚಿಣ್ಣಪ್ಪ ಒತ್ತಾಯಿಸಿದ್ದಾರೆ. -ಟಿ.ಎಲ್.ಎಸ್.