ಸಿದ್ದಾಪುರ, ಆ. 3: ಹುಲಿ ಧಾಳಿಗೆ ಎತ್ತು ಬಲಿಯಾದ ಘಟನೆ ಸಿದ್ದಾಪುರ ಘಟ್ಟದಳ್ಳ ಸಮೀಪದ ಕಾಫಿ ತೋಟವೊಂದರಲ್ಲಿ ನಡೆದಿದೆ. ಕಳೆದ ಕೆಲವು ತಿಂಗಳಿನಿಂದ ಹುಲಿಯು ಕಾಫಿ ತೋಟಗಳಲ್ಲಿ ಸುತ್ತಾಡುತ್ತಿದ್ದು, 25 ಕ್ಕೂ ಅಧಿಕ ಜಾನುವಾರುಗಳನ್ನು ಕೊಂದು ಕೆಲವು ಜಾನುವಾರುಗಳ ಮಾಂಸವನ್ನು ತಿಂದು ಅಟ್ಟಹಾಸ ಮೆರೆಯುತ್ತಿದೆ.
ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಟ್ಟದಳ್ಳದ ಬಳಿ ಇರುವ ಮೈಲಾದಪುರದ ಬಿಬಿಟಿಸಿ ಕಂಪೆನಿಗೆ ಸೇರಿದ ಮೈಲಾದಪುರದ ಕಾಫಿ ತೋಟದಲ್ಲಿ ಮೇಯಲು ತೆರಳಿದ್ದ ಎತ್ತುವೊಂದರ ಮೇಲೆ ಹುಲಿ ಧಾಳಿ ನಡೆಸಿ ಸಾಯಿಸಿದೆ. ಈ ಘಟನೆ ಯಿಂದಾಗಿ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. ಹುಲಿಯು ಜನವಸತಿ ಪ್ರದೇಶದಲ್ಲಿ ಸುತ್ತಾಡುತ್ತಿದ್ದು ಹೆಜ್ಜೆಗುರುತು ಕಂಡು ಬಂದಿದೆ. ಹುಲಿಯನ್ನು ಕೂಡಲೇ ಸೆರೆಹಿಡಿಯಬೇಕೆಂದು ಮೈಲಾದಪುರದ ಹಿರಿಯ ಕಾಂಗ್ರೆಸ್ ಮುಖಂಡ ಅಜಿನೀಕಂಡ ರಾಜು ಅಪ್ಪಯ್ಯ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. - ವಾಸು