ಪೊನ್ನಂಪೇಟೆ, ಆ. 3 : ಇದುವರೆಗೂ ರಾಜ್ಯ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ (ಎ.ಎ.ಜಿ.) ಆಗಿದ್ದ ಕೊಡಗಿನ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ಇದೀಗ ರಾಜ್ಯ ಸರಕಾರ ಪ್ರÀಥಮ ದರ್ಜೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಬಡ್ತಿ ನೀಡಿ ಆದೇಶ ಹೊರಡಿಸಿದೆ.

ಕಳೆದ ಸರಕಾರದ ಅವಧಿಯಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ ಎ.ಎಸ್. ಪೊನ್ನಣ್ಣ ಅವರನ್ನು ನೂತನ ಸಮ್ಮಿಶ್ರ ಸರಕಾರ ಜಾರಿಗೆ ಬಂದ ಬಳಿಕ ಅದೇ ಹುದ್ದೆಯಲ್ಲಿ ಮುಂದುವರಿಸಿ ಆದೇಶ ಹೊರಡಿಸಿತ್ತು. ಇದೀಗ ಸರಕಾರ ಪೊನ್ನಣ್ಣ ಅವರ ಕಾರ್ಯದಕ್ಷತೆಯನ್ನು ಪರಿಗಣಿಸಿ ರಾಜ್ಯ ಸರಕಾರದ ಪ್ರÀಥಮ ದರ್ಜೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನೇಮಿಸಿದೆ. ಈ ಕುರಿತು ಸರಕಾರಿ ಆದೇಶ ಹೊರಡಿಸಿರುವ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ಪದ್ಮಾವತಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಎ.ಎಸ್. ಪೊನ್ನಣ್ಣ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.ಎ.ಎಸ್. ಪೊನ್ನಣ್ಣ ಅವರು ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿದ್ದ ಸಂದರ್ಭದಲ್ಲಿ ಹಲವು ಮಹತ್ವದ ಪ್ರಕರಣದಲ್ಲಿ ಸರಕಾರದ ಪರವಾಗಿ ಸಮರ್ಥ ವಾದ ಮಂಡಿಸಿ ಯಶಸ್ವಿಯಾಗಿದ್ದರು.

ಮೂಲತಃ ಕೊಡಗಿನ ಹುದಿಕೇರಿ ಸಮೀಪದ ಬೆಳ್ಳೂರಿನವರಾದ ಎ.ಎಸ್. ಪೊನ್ನಣ್ಣ ಅವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿ ರಾಜ್ಯ ಹೈಕೋರ್ಟ್‍ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಪೊನ್ನಣ್ಣ ಅವರು ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಮತ್ತು ದಿ. ಡಾಟಿ ಪೊನ್ನಮ್ಮ ದಂಪತಿಗಳ 4ನೇ ಪುತ್ರರಾಗಿದ್ದಾರೆ.