ವೀರಾಜಪೇಟೆ, ಆ. 3: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ತಾ. 2 ರಿಂದ ನೀತಿ ಸಂಹಿತೆ ಜಾರಿಯಾಗಿದ್ದು ಚುನಾವಣೆ ಮುಕ್ತಾಯಗೊಳ್ಳುವ ತನಕ ಪಟ್ಟಣ ಪಂಚಾಯಿತಿಯಿಂದ ಯಾವದೇ ಹೊಸ ಕಾಮಗಾರಿ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ. ಈಗಿನ ಪಂಚಾಯಿತಿಯ ಆಡಳಿತ ಮುಂದಿನ ಸೆಪ್ಟಂಬರ್ 12ಕ್ಕೆ ಅವಧಿ ಮುಗಿಯಲಿದ್ದರೂ ಚುನಾವಣೆ ಘೋಷಣೆಯಾಗಿರುವದರಿಂದ ಸದಸ್ಯರುಗಳ ಅವಧಿಯೂ ಇಂದಿಗೆ ಮುಗಿದಂತಾಗಿದೆ. ಸರಕಾರದಿಂದ ಆದೇಶ ಬಂದ ತಕ್ಷಣ ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜು ಅವರು ಚುನಾವಣೆ ಮುಗಿದು ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಳ್ಳುವವರೆಗೂ ಪಟ್ಟಣ ಪಂಚಾಯಿತಿಯ ಆಡಳಿತ ಅಧಿಕಾರಿಯಾಗಿ ಮುಂದುವರೆಯಲಿದ್ದಾರೆ. ವೀರಾಜಪೇಟೆ ತಾಲೂಕು ಕಚೇರಿಯ ಚುನಾವಣಾ ವಿಭಾಗದಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಗಾಗಿ ಮತದಾರರ ಪಟ್ಟಿ ಪರಿಷ್ಕøತಗೊಂಡಿದ್ದು ಚುನಾವಣೆಯ ಪೂರ್ವ ಸಿದ್ಧತೆಯೂ ನಡೆದಿದೆ.