ಶನಿವಾರಸಂತೆ, ಆ. 3: ಶನಿವಾರಸಂತೆ ಹೋಬಳಿಯಾದ್ಯಂತ ಮತ್ತೆ ಉತ್ತಮ ಮಳೆಯಾಗಿದೆ. ಕೊಡ್ಲಿಪೇಟೆ, ಶನಿವಾರಸಂತೆ, ನಿಡ್ತ, ಆಲೂರು-ಸಿದ್ದಾಪುರ, ಮಾಲಂಬಿ, ಮುಳ್ಳೂರು ಮೊದಲಾದ ಗ್ರಾಮಗಳಲ್ಲಿ ಮಳೆ ಬಿರುಸು ಪಡೆದಿದೆ.

ಶನಿವಾರಸಂತೆ, ಬಾಣಾವರ, ಕುಶಾಲನಗರ ಮಾರ್ಗವಾಗಿ ಮೈಸೂರಿಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಮುಳ್ಳೂರು ಗ್ರಾಮದ ಇಂಟಿ ನಾಯಕನ ಕೆರೆ ನಿರಂತರ ಸುರಿದ ಮಳೆ ಹಿನ್ನೆಲೆ ರಸ್ತೆ ಅಂಚಿನವರೆಗೂ ತುಂಬಿ ಹರಿಯುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ಭಾಗದ ರೈತರಿಗೆ ಸಂತಸವಾಗಿದ್ದರೂ ವಾಹನ ಚಾಲಕರು ಮಾತ್ರ ಭಯದಿಂದಲೇ ವಾಹನ ಚಾಲಿಸಬೇಕಾಗಿದೆ.

ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೂರು ಗ್ರಾಮದ ಇಂಟಿ ನಾಯಕನ ಕೆರೆ 500 ವರ್ಷಗಳ ಇತಿಹಾಸ ಹೊಂದಿದೆ. ಹಿಂದೆ ಹತ್ತಾರು ಎಕರೆ ವಿಸ್ತೀರ್ಣ ಹೊಂದಿದ್ದ ಕೆರೆಯ ಅಚ್ಚುಕಟ್ಟು ಪ್ರದೇಶ ಇಂದು ಒತ್ತುವರಿಯಾಗಿದೆ. ಪ್ರಸ್ತುತ ಮೂರುವರೆ ಎಕರೆ ವಿಸ್ತೀರ್ಣ ಹೊಂದಿದ್ದರೂ ಈ ಕೆರೆಯನ್ನೇ ನಂಬಿ ಮುಳ್ಳೂರು ಗ್ರಾಮದ ರೈತರು ವ್ಯವಸಾಯ ಮಾಡುತ್ತಾರೆ.

ಕೆರೆಯ ಕೋಡಿ ಮತ್ತು ತೂಬಿನಿಂದ ಬಿಡುವ ನೀರು ನಾಲೆಯ ಮೂಲಕ ಗ್ರಾಮದೊಳಗಿರುವ ಮತ್ತೊಂದು ಕೆರೆಗೆ ಸೇರುತ್ತದೆ. ಈ ಕೆರೆಯ ನೀರಿನಿಂದ ಗ್ರಾಮದ 400 ಎಕರೆ ಗದ್ದೆಗಳಿಗೆ ನೀರು ಹರಿಯುತ್ತದೆ. ವ್ಯವಸಾಯಕ್ಕೆ ಸುಗಮವಾಗಿದೆ.