ಜಿ.ಪಂ. ಅಧ್ಯಕ್ಷರ ಸಹಿತ ಅನೇಕರು ಸಲ್ಲಿಸಿದ್ದ ದೂರುಗಳ ಅರ್ಜಿಗಳನ್ನು ಕೊಡಗು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲೇ ಸಂಬಂಧಿಸಿದ ಅಧಿಕಾರಿಗಳಿಗೆ ವಿಲೇವಾರಿ ಮಾಡಿದ ಸಚಿವ ಸಾ.ರಾ. ಮಹೇಶ್ ಅವರು, ದುಬಾರೆ ರ್ಯಾಫ್ಟಿಂಗ್ ಸಮಸ್ಯೆಗೂ ತೆರೆ ಎಳೆದರು. ಶ್ರೀಮಂಗಲ ಹಾಗೂ ದುಬಾರೆ ವ್ಯಾಪ್ತಿಯ ರ್ಯಾಫ್ಟಿಂಗ್ ಮಾಲೀಕರೊಂದಿಗೆ ಮಾತುಕತೆ ನಡೆಸಿದ ಸಚಿವರು, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ನಿಯಮದಡಿ ರ್ಯಾಫ್ಟಿಂಗ್ ಮುಂದುವರೆಸಲು ಹಸಿರು ನಿಶಾನೆ ತೋರಿದರು.(ಮೊದಲ ಪುಟದಿಂದ) ಸಾರ್ವಜನಿಕ ಹಿತದೊಂದಿಗೆ ಪ್ರವಾಸಿಗರಿಗೆ ಕಿರುಕುಳವಾಗದಂತೆ ಮುನ್ನೆಚ್ಚರಿಕೆ ವಹಿಸಿದರೆ, ವಿನಾಕಾರಣ ತೊಂದರೆ ಮಾಡುವದಿಲ್ಲವೆಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸಚಿವರೆದುರು ಸಂಬಂಧಿಸಿದವರಿಗೆ ಸೂಚ್ಯವಾಗಿ ಹೇಳಿದರಲ್ಲದೆ, ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವದೆಂದರು. ಬಹುದಿನಗಳ ಬಳಿಕ ಜಿಲ್ಲೆಗೆ ಉಸ್ತುವಾರಿ ಸಚಿವರೊಬ್ಬರ ಆಗಮನದೊಂದಿಗೆ, ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಹಂಚಿಕೊಂಡ ತೃಪ್ತಿಯೊಂದಿಗೆ ಹಿಂತೆರಳುತ್ತಿದ್ದ ದೃಶ್ಯ ಎದುರಾಯಿತು. ಉಸ್ತುವಾರಿ ಸಚಿವರ ಕಚೇರಿಯಲ್ಲಿ ಕಿಕ್ಕಿರಿದು ಸಾರ್ವಜನಿಕರು ಪಾಲ್ಗೊಂಡಿದ್ದು ಗೋಚರಿಸಿತು.