ಕುಶಾಲನಗರ, ಆ 3: ಉಸ್ತುವಾರಿ ಸಚಿವರು ಮಡಿಕೇರಿಗೆ ತೆರಳುವ ಸಂದರ್ಭ ಮಾರ್ಗ ಮಧ್ಯೆ ಗಾಯಗೊಂಡು ಬಿದ್ದಿದ್ದ ಜಿಂಕೆಯೊಂದಕ್ಕೆ ಆರೈಕೆ ಮಾಡಿದ ಮಾನವೀಯ ಘಟನೆಯೊಂದು ಶುಕ್ರವಾರ ಮಧ್ಯಾಹ್ನ ನಡೆದಿದೆ. ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಕುಶಾಲನಗರದಿಂದ ಆನೆಕಾಡು ಮಾರ್ಗ ಮೂಲಕ ತೆರಳುತ್ತಿದ್ದ ಸಂದರ್ಭ ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ತೆರಳಿದ ಟೆಂಪೋ ಟ್ರಾವೆಲರ್ ಟೂರಿಸ್ಟ್ ವಾಹನವೊಂದು ರಸ್ತೆ ದಾಟುತ್ತಿದ್ದ ಜಿಂಕೆಗೆ ಡಿಕ್ಕಿಯಾಗಿ ಬಿದ್ದು ನರಳುತ್ತಿತ್ತು. ವಾಹನ ಚಾಲಕ ಸ್ಥಳದಲ್ಲಿ ನಿಲ್ಲ್ಲಿಸದೆ ಅಲ್ಲಿಂದ ವೇಗವಾಗಿ ವಾಹನ ಚಾಲಿಸಿ ಮರೆಯಾಗಿದ್ದಾನೆ. ಈ ಸಂದರ್ಭ ಅಮಾಯಕ ಜಿಂಕೆ ಕೆಳಗೆ ಬಿದ್ದು ನರಳುತ್ತಿದ್ದ ದೃಶ್ಯವನ್ನು ಕಂಡು ಮರುಗಿದ ಸಚಿವರು ಅಲ್ಲಿ ವಾಹನ ನಿಲ್ಲಿಸಲು ಸೂಚಿಸಿದ್ದಾರೆ. ಅಲ್ಲಿ ಕೆಳಗಿಳಿದ ಸಚಿವರು ರಸ್ತೆಯಲ್ಲಿ ಬಿದ್ದು ಗಾಯಗೊಂಡ ಜಿಂಕೆಯನ್ನು ಗಮನಿಸಿ ಜಿಂಕೆಗೆ ನೀರು ನೀಡುವದರೊಂದಿಗೆ ಆರೈಕೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿ ಮೂಕ ಪ್ರಾಣಿಯನ್ನು ರಕ್ಷಿಸುವಂತೆ ನಿರ್ದೇಶಿಸಿದ್ದಾರೆ.. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖಾ ಮಡಿಕೇರಿ ಉಪ ವಿಭಾಗ ಸಂರಕ್ಷಣಾಧಿಕಾರಿ ಮಂಜುನಾಥ್, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಮತ್ತು ಸಿಬ್ಬಂದಿ ಪಶುವೈದ್ಯ ತಜ್ಞರಾದ ಡಾ.ಜೀವನ್, ಡಾ.ಚಂದ್ರಹಾಸ್ ಅವರೊಂದಿಗೆ ಧಾವಿಸಿದ್ದಾರೆ. ಅಪಘಾತದಿಂದ ಜಿಂಕೆಯ ಬಲಗೈ
(ಮೊದಲ ಪುಟದಿಂದ) ಮೂಳೆ ಮುರಿದಿದೆ. ತೀವ್ರ ಗಾಯಗೊಂಡು ರಕ್ತಸ್ರಾವವಾಗಿತ್ತು. ಚಿಕಿತ್ಸೆ ನೀಡಿದ ಇಲಾಖಾ ಅಧಿಕಾರಿಗಳ ತಂಡ ನಂತರ ಜಿಂಕೆಯನ್ನು ಕುಶಾಲನಗರ ಕಾವೇರಿ ನಿಸರ್ಗಧಾಮಕ್ಕೆ ಸ್ಥಳಾಂತರಿಸಿದ್ದಾರೆ.
ಜಿಂಕೆ ಚೇತರಿಸಿಕೊಳ್ಳುತ್ತಿದೆ ಎಂದು ಎಸಿಎಫ್ ಎಂ.ಎಸ್.ಚಿಣ್ಣಪ್ಪ ಮಾಹಿತಿ ನೀಡಿದ್ದಾರೆ. ಆದರೆ, ಉದರ ಭಾಗ ಇತ್ಯಾದಿ ಆಂತರಿಕವಾಗಿ ಆಘಾತವಾಗಿರಬಹುದೇ ಎನ್ನುವದು ಇನ್ನಷ್ಟೇ ಗೊತ್ತಾಗಬೇಕಿದೆ ಎಂದಿದ್ದಾರೆ. ಆಪಘಾತ ಮಾಡಿದ ವಾಹನ ಹಾಗೂ ಚಾಲಕನ ಪತ್ತೆ ಕುರಿತು ಸಿ,ಸಿ,ಟಿ,ವಿ ದೃಶ್ಯಾವಳಿ ಅವಲೋಕಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
-ವರದಿ:ಸಿಂಚು