ಮಡಿಕೇರಿ, ಆ. 3: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಅತ್ಯಗತ್ಯವಾಗಿದ್ದು, ಇದಕ್ಕೆ ಆದ್ಯತೆ ನೀಡುವದಾಗಿ ರಾಜ್ಯ ಪ್ರವಾಸೋದ್ಯಮ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಭರವಸೆಯಿತ್ತರು. ಕೊಡಗಿನಲ್ಲಿ ಪ್ರವಾಸಿಗರ ಆಗಮನ ಹೆಚ್ಚಾಗುತ್ತಿದ್ದು, ಅನುಕೂಲ ಕಲ್ಪಿಸಬೇಕಾಗಿದೆ. ಈ ದಿಸೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರತ್ಯೇಕವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಣವನ್ನು ವಿನಿಯೋಗ ಮಾಡಲಾಗುವದು ಎಂದು ಅವರು ಸ್ಪಷ್ಟ ನುಡಿಯಾಡಿದರು.

ಇಂದು ಉಸ್ತುವಾರಿ ಸಚಿವರ ಕೊಠಡಿಯನ್ನು ಜಿಲ್ಲಾ ಆಡಳಿತ ಭವನ ಸಂಕೀರ್ಣದ ಒಳಗೆ ಉದ್ಘಾಟಿಸಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಈಗಾಗಲೇ ಮುಖ್ಯಮಂತ್ರಿಯವರು ತಮ್ಮ ಕೊಡಗು ಭೇಟಿ ಸಂದರ್ಭ ಮಳೆ ಪರಿಹಾರಕ್ಕಾಗಿ ರೂ. 100 ಕೋಟಿ ಮಂಜೂರು ಮಾಡಿದ್ದಾರೆ. ಈ ಪೈಕಿ ರೂ. 50 ಕೋಟಿ ಬಿಡುಗಡೆಯಾಗಿದೆ ಎಂದು ಸಚಿವರು ಖಚಿತಪಡಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರ ಅನುಮತಿ ಪುನರ್ ವಿಮರ್ಶೆ

ಮಡಿಕೇರಿ ನಗರಾಭಿವೃದ್ಧಿ ಪರಿವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಮನೆಗಳು ಸೇರಿದಂತೆ ಕಟ್ಟಡಗಳ ದುರಸ್ತಿಗೆ ಅನುಮತಿ ಸಿಗುತ್ತಿಲ್ಲ. ಅಲ್ಲದೆ, ನೂತನ ಕಟ್ಟಡಗಳನ್ನು ನಿರ್ಮಿಸಲೂ ಕೂಡ ಅನುಮತಿ ದೊರೆಯುತ್ತಿಲ್ಲ. ಇಷ್ಟೇ ಅಲ್ಲದೇ ಪ್ರಾಧಿಕಾರ ವ್ಯಾಪ್ತಿಗೆ ಬರುವ ತೋಟಗಳಲ್ಲಿ ಫಾರ್ಮ್ ಹೌಸ್ ನಿರ್ಮಿಸಲು ಕೂಡ ಅವಕಾಶ ಕೊಡುತ್ತಿಲ್ಲ ಎಂಬ ಕುರಿತು ಪತ್ರಕರ್ತರು ಸಚಿವರ ಗಮನ ಸೆಳೆದರು. ಈ ಕುರಿತು

(ಮೊದಲ ಪುಟದಿಂದ) ಪ್ರತಿಕ್ರಿಯಿಸಿದ ಸಚಿವ ಮಹೇಶ್ ಅವರು ಇದೊಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ರಾಜ್ಯದಲ್ಲಿರುವ ಎಲ್ಲ ಕಡೆಯ ನಗರಾಭಿವೃದ್ಧಿ ಪ್ರಾಧಿಕಾರ ಪರಿವ್ಯಾಪ್ತಿಯ ಪ್ರದೇಶಗಳಲ್ಲಿ ಇದೇ ಕಾನೂನು ಜಾರಿಯಲ್ಲಿದೆ. ಇದರಿಂದಾಗಿ ಆಯಾ ವಿಭಾಗದ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಬವಣೆ ಪಡುತ್ತಿರುವದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವರೂ ಕೂಡ ಚರ್ಚಿಸಿದ್ದಾರೆ. ಅಲ್ಲದೆ, ಸರಕಾರಕ್ಕೆ ಇದರಿಂದ ಆದಾಯ ಸ್ಥಗಿತಗೊಂಡಿದೆ. ಈಗಿನ ವ್ಯವಸ್ಥೆಯನ್ನು ಬದಲಾಯಿಸಿ ಹೊಸ ನೀತಿಯನ್ನು ಜಾರಿಗೊಳಿಸುವ ಸಲುವಾಗಿ ಹಾಗೂ ನಿರ್ಬಂಧಗಳನ್ನು ಸಡಿಲಿಸುವದಕ್ಕಾಗಿ ರಾಜ್ಯ ಕಾನೂನು ಇಲಾಖೆಗೆ ಸೂಕ್ತ ಶಿಫಾರಸ್ಸು ಮಾಡಲಾಗಿದೆ. ಅಲ್ಲಿಂದ ಈ ಬಗ್ಗೆ ಸೂಕ್ತ ಮಾರ್ಪಾಡು ಮಾಡಿದ ಬಳಿಕ ಇದನ್ನು ಜಾರಿಗೊಳಿಸಲಾಗುವದೆಂದು ಸಚಿವರು ಮಾಹಿತಿಯಿತ್ತರು. ಆದರೆ ನಗರಾಭಿವೃದ್ಧಿ ಪ್ರಾಧಿಕಾರದ ಪರಿವ್ಯಾಪ್ತಿಯಲ್ಲಿರುವ ಯಾವದೇ ತೋಟ ಪ್ರದೇಶದೊಳಗೆ ಫಾರ್ಮ್ ಹೌಸ್ ನಿರ್ಮಿಸಲು ಅಧಿಕಾರಿಗಳು ತಡೆಯೊಡ್ಡುವದು ಸರಿಯಲ್ಲ. ಈ ಬಗ್ಗೆ ಸಂಬಂಧಿಸಿದವರಿಗೆ ತಾನು ನಿರ್ದೇಶಿಸುವದಾಗಿ ತಿಳಿಸಿದರು. ತೋಟ ವ್ಯಾಪ್ತಿಯಲ್ಲಿ ಬೆಳೆಗಾರರಿಗೆ ಮುಕ್ತ ಅವಕಾಶವಿದೆ ಎಂದು ನುಡಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯ ಅನೇಕ ಸಮಸ್ಯೆಗಳ ಬಗ್ಗೆ ಕೆಡಿಪಿ ಸಭೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲಾಗುವದೆಂದರು.

ಹೋಂಸ್ಟೇಗಳಿಗೆ ಸ್ಪಷ್ಪ ಸೂಚನೆ

ಜಿಲ್ಲೆಯಲ್ಲಿ ಹೋಂಸ್ಟೇಗಳು ನಿರ್ವಹಣೆಗೊಳ್ಳಬೇಕಾದರೆ ಅಧಿಕೃತ ನೋಂದಾವಣೆಗೊಳ್ಳಲೇಬೇಕು. ಈಗಾಗಲೇ ನೋಂದಾವಣೆಗೆ ನೀಡಲಾಗಿದ್ದ ಗಡುವು ಮುಕ್ತಾಯ ಗೊಂಡಿದೆ. ಇನ್ನಾದರೂ ಅನಧಿಕೃತ ಹೋಂಸ್ಟೇ ಮಾಲೀಕರು ನೋಂದಾವಣೆ ಮಾಡದಿದ್ದರೆ ಅಂತವರ ವಿರುದ್ಧ ಎಸ್ಪಿ, ಜಿ.ಪಂ. ಸಿಇಓ ಹಾಗೂ ಡಿಸಿ ಸೇರಿದಂತೆ ಜಿಲ್ಲಾಡಳಿತದ ವತಿಯಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗು ವದೆಂದು ಸಚಿವರು ಮುನ್ನೆಚ್ಚರಿಕೆ ಯಿತ್ತರು. ಜಿಲ್ಲೆಯಲ್ಲಿನ ಹೋಂಸ್ಟೇ ಪರಿಸರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕೆಂದು ಸೂಚನೆಯಿತ್ತ ಸಚಿವರು ಪರಿಸರ ರಕ್ಷಣೆಯ ಮುಖ್ಯ ಹೊಣೆಯ ಬಗ್ಗೆ ಜಾಗೃತಿ ಇರಲಿ ಎಂದು ಸಲಹೆಯಿತ್ತರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದಾಗಿಯೂ ಅಭಿಪ್ರಾಯಪಟ್ಟರು.

ಈ ಸಂದರ್ಭ ಜೆಡಿಎಸ್ ನಾಯಕರುಗಳಾದ ಬಿ.ಎ. ಜೀವಿಜಯ, ಸಂಕೇತ್ ಪೂವಯ್ಯ ಮೊದಲಾದವರಿದ್ದರು.