ಸೋಮವಾರಪೇಟೆ, ಜು. 3: ರಾಜಕೀಯ ಪಕ್ಷಗಳ ನಡುವಿನ ಪೈಪೋಟಿಗೆ ಸೋಮವಾರಪೇಟೆ ಪ.ಪಂ. ಚುನಾವಣಾ ಅಖಾಡ ಸಿದ್ದವಾಗುತ್ತಿದೆ. ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಮಣಿಸಲು ಜೆಡಿಎಸ್ ಯೋಜನೆ ರೂಪಿಸುತ್ತಿದ್ದು, ಪ್ರತಿಷ್ಠೆಯ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರವನ್ನು ಕಮಲ ಪಾಳಯದಲ್ಲಿ ಉಳಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸುತ್ತಿದೆ.

ಇಲ್ಲಿನ ಪಟ್ಟಣ ಪಂಚಾಯಿತಿಗೆ ಅಧಿಕೃತ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೆ ತಾ. 29 ರಂದು ಚುನಾವಣೆ ನಿಗದಿಯಾಗಿದೆ. ಟಿಕೆಟ್ ಆಕಾಂಕ್ಷಿಗಳ ದಂಡು ನಾಯಕರ ಎದುರು ಪೆರೇಡ್ ನಡೆಸುತ್ತಿದ್ದು, ಹಾಲಿ ಇರುವ ಬಹುತೇಕ ಸದಸ್ಯರು ಪ್ರಸ್ತುತ ಪ್ರತಿನಿಧಿಸಿದ ವಾರ್ಡ್ ಬಿಟ್ಟು ಬೇರೆ ವಾರ್ಡ್‍ಗಳತ್ತ ಮುಖ ಮಾಡಬೇಕಿದೆ.

ಕಳೆದ 20 ವರ್ಷಗಳಿಂದ ಪಟ್ಟಣ ಪಂಚಾಯಿತಿಯ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ, ಈ ಬಾರಿಯೂ ಅಧಿಕಾರ ಹಿಡಿಯಲು ಹವಣಿಸುತ್ತಿದ್ದು, ಕಮಲ ಪಾಳಯದಿಂದ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಮಾತುಕತೆ ನಡೆಸುತ್ತಿವೆ.

ವಾರ್ಡ್ ಬದಲಾವಣೆ ಸಾಧ್ಯತೆ: ಹಾಲಿ ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಈ ಬಾರಿ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ವಿಶ್ವೇಶ್ವರಯ್ಯ ರಸ್ತೆ, ವೆಂಕಟೇಶ್ವರ ಬ್ಲಾಕ್‍ನಿಂದ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಹಾಲಿ ಸದಸ್ಯ ಕೆ.ಎ. ಆದಂ ಸಿ.ಕೆ. ಸುಬ್ಬಯ್ಯ ರಸ್ತೆ ವಾರ್ಡ್‍ನಿಂದ ಅಥವಾ ರೇಂಜರ್ ಬ್ಲಾಕ್‍ನಿಂದ ಸ್ಪರ್ಧಿಸಲು ಚಿಂತಿಸಿದ್ದರೆ, ಸುಷ್ಮಾ ಶೆಟ್ಟಿ, ಬಿ.ಎಂ. ಈಶ್ವರ್ ಅವರುಗಳು ತಮಗೆ ಅನುಕೂಲಕರವಾದ ವಾರ್ಡ್‍ಗಳ ಹುಡುಕಾಟ ನಡೆಸುತ್ತಿದ್ದಾರೆ. ಶೀಲಾ ಡಿಸೋಜಾ ಅವರು ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ವಿಶ್ವೇಶ್ವರಯ್ಯ ವಾರ್ಡ್‍ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಬಿ.ಎಂ. ಸುರೇಶ್ ಅವರಿಗೆ ದೇವಸ್ಥಾನ ರಸ್ತೆ, ಜನತಾ ಕಾಲೋನಿ, ಸಿ.ಕೆ. ಸುಬ್ಬಯ್ಯ ರಸ್ತೆಯಿಂದ ಸ್ಪರ್ಧಿಸಲು ಅವಕಾಶ ಲಭಿಸಿದೆ.

ಮಾಜಿ ಸದಸ್ಯ ಬಿ. ಸಂಜೀವ ಜನತಾ ಕಾಲೋನಿಯಿಂದ ಅಥವಾ ರೇಂಜರ್ ಬ್ಲಾಕ್‍ನಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಚಿಂತನೆ ಹರಿಸಿದ್ದಾರೆ. ಮಾಜಿ ಅಧ್ಯಕ್ಷ ಎನ್.ಎಸ್. ಮೂರ್ತಿ ರೇಂಜರ್ ಬ್ಲಾಕ್‍ನಿಂದ ಸ್ಪರ್ಧಿಸಲು ತಯಾರಾಗಿದ್ದು, ಈಗಾಗಲೇ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಮಾಜಿ ಅಧ್ಯಕ್ಷೆ ನಳಿನಿ ಗಣೇಶ್ ಈ ಹಿಂದೆ ಪ್ರತಿನಿಧಿಸಿದ್ದ ವೆಂಕಟೇಶ್ವರ ಬ್ಲಾಕ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅಲ್ಲದೇ ಬಾಣಾವಾರ ರಸ್ತೆ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಾಗಿರುವದರಿಂದ ಯಾವದಾದರೊಂದು ವಾರ್ಡ್‍ನಲ್ಲಿ ಸ್ಪರ್ಧಿಸಲು ಅವಕಾಶ ಹೆಚ್ಚಾಗಿದೆ. ಹಾಲಿ ಸದಸ್ಯೆ ಲೀಲಾ ನಿರ್ವಾಣಿ ಅವರಿಗೆ ಈ ಬಾರಿ ಮಹದೇಶ್ವರ ಬ್ಲಾಕ್-1 ರಿಂದಲೇ ಮತ್ತೆ ಸ್ಪರ್ಧಿಸಲು ಅವಕಾಶ ಒದಗಿಬಂದಿದೆ.

2001ರಲ್ಲಿ ಆಯ್ಕೆಯಾಗಿದ್ದ ಹೆಚ್.ಎಸ್.ವಿಜಯ್‍ಕುಮಾರ್ ದೇವಸ್ಥಾನ ರಸ್ತೆ ವಾರ್ಡ್‍ನಿಂದ ಜೆಡಿಎಸ್‍ನಿಂದ ಸ್ಪರ್ಧಿಸಲು ತಯಾರಾಗಿದ್ದು, 2008 ರಲ್ಲಿ ಬಿಜೆಪಿ ಸದಸ್ಯೆಯಾಗಿದ್ದ ದ್ರಾಕ್ಷಾಯಿಣಿ ಶಿವಾನಂದ್ ಮತ್ತೆ ರೇಂಜರ್ ಬ್ಲಾಕ್-2 ವಾರ್ಡ್‍ನಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಲ್ಲಿ ಹಾಲಿ ಬಿಜೆಪಿ ಸದಸ್ಯೆ ಸುಶೀಲಾ ಟಿಕೆಟ್‍ಗಾಗಿ ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆಯಿದೆ. 2008ರಲ್ಲಿ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದ ಜಯಂತಿ ಶಿವಕುಮಾರ್, ಈ ಬಾರಿ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ ಎನ್ನಲಾಗಿದೆ.

ಇದರೊಂದಿಗೆ ಮೂರೂ ಪಕ್ಷಗಳಿಂದ ಟಿಕೆಟ್‍ಗಾಗಿ ಅನೇಕ ಆಕಾಂಕ್ಷಿಗಳು ಹರಸಾಹಸ ಪಡುತ್ತಿದ್ದು, ನಾಯಕರ ಎದುರು ತಮ್ಮ ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ. ಹೊಸಬರಿಗೆ ಅವಕಾಶ ನೀಡಬೇಕು ಎಂಬ ವಾದವನ್ನು ಮುಖಂಡರ ಎದುರು ಮಂಡಿಸುತ್ತಿದ್ದಾರೆ. ತಾ. 29 ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಕಡಿಮೆ ಕಾಲಾವಕಾಶ ಇರುವ ಹಿನ್ನೆಲೆ ಟಿಕೆಟ್ ಅಂತಿಮಗೊಳಿಸುವದು ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಪಟ್ಟಣದ ಹಲವು ಕಡೆಗಳಲ್ಲಿ ಅಳವಡಿಸಿದ್ದ ಪ್ರಚಾರ ಫಲಕಗಳನ್ನು ಮುಚ್ಚಲು ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ. ಪಟ್ಟಣ ಪಂಚಾಯಿತಿಯ ನೂತನ ಕಚೇರಿ ಕಟ್ಟಡ ಈಗಷ್ಟೇ ಉದ್ಘಾಟನೆಗೊಂಡಿದ್ದು, ಹಾಲಿ ಸದಸ್ಯರಾಗಿರುವ ಎಷ್ಟು ಮಂದಿಗೆ ನೂತನ ಕಚೇರಿಯಲ್ಲಿ ಕುರ್ಚಿ ಸಿಗಲಿದೆ ಎಂಬದನ್ನು ಕಾದು ನೋಡಬೇಕಿದ್ದು, ಈ ಚುನಾವಣೆ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಮಾಜಿ ಸಚಿವ ಬಿ.ಎ. ಜೀವಿಜಯ ನಡುವೆ ಪ್ರತಿಷ್ಠೆಗೆ ಕಾರಣವಾಗಿದೆ ಎಂದು ಜನಾಭಿಪ್ರಾಯವಿದೆ.