ಮೂರ್ನಾಡು, ಆ. 3: ಮೂರ್ನಾಡು ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಜರುಗಿತು.
ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭವನ್ನು ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಕೆ. ಸರೋಜಿನಿ ಉದ್ಘಾಟಿಸಿದರು. ಬಳಿಕ ಮಾತನಾಡಿವಿದ್ಯಾರ್ಥಿಗಳು ನಾಯಕತ್ವ ಗುಣದೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಎಲ್ಲಾ ರೀತಿಯ ಸವಲತ್ತುಗಳು ಇದ್ದರೂ ಕೂಡ ಆತ್ಮವಿಶ್ವಾಸವೊಂದಿಲ್ಲದಿದ್ದರೆ ನಾಯಕನಾಗಿ ಸಾಧನೆಗೈಯಲು ಸಾಧ್ಯವಿಲ್ಲ. ಶಿಕ್ಷಕರ ಮತ್ತು ಪೋಷಕರ ಸಮನ್ವಯತೆ ಸಹಭಾಗಿತ್ವದಿಂದ ಮಾತ್ರ ಮಕ್ಕಳ ಭವಿಷ್ಯ ಪ್ರಜ್ವಲವಾಗುತ್ತದೆ. ಸಣ್ಣ ಮಕ್ಕಳಿರುವಾಗಲೆ ತಪ್ಪುಗಳನ್ನು ತಿದ್ದುವ ಕಾರ್ಯ ಪೋಷಕರಿಂದ ಆಗಬೇಕು. ಹಿರಿಯರ ಕಾರ್ಯವೈಖರಿ, ವ್ಯಕ್ತಿತ್ವಗಳನ್ನು ಪ್ರೇರಣೆಯಾಗಿ ವಿದ್ಯಾರ್ಥಿಗಳು ತೆಗೆದುಕೊಂಡಾಗ ಉತ್ತಮ ಜೀವನವನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಪ್ರೌಢಶಾಲೆಯ ವಿದ್ಯಾರ್ಥಿ ಸಂಘದಲ್ಲಿ ಶಾಲಾ ನಾಯಕನಾಗಿ ರಾಶಿಕ್, ಉಪ ನಾಯಕನಾಗಿ ಚರಣ್, ಕ್ರೀಡಾ ನಾಯಕಿ ನಾಜಿಮ, ವಿಜ್ಞಾನ ಸಂಘದ ನಾಯಕಿ ರಿಜ್ವಾನಾ, ಭಾಷಾ ಸಂಘದ ನಾಯಕಿ ಪೂಜಾ, ಕಲಾ ಸಂಘದ ನಾಯಕಿ ಸುಶ್ಮಿತ ಆಯ್ಕೆಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಮಾತನಾಡಿ ಮಕ್ಕಳ ಶೈಕ್ಷಣಿಕ ಪಥದಲ್ಲಿ ಶಿಕ್ಷಕರೊಂದಿಗೆ ಪೋಷಕರು ಹೆಚ್ಚು ಮುತುವರ್ಜಿ ವಹಿಸಬೇಕು. ವಿದ್ಯಾರ್ಥಿಗಳು ಶಿಸ್ತಿಗೆ ಪ್ರಾಮುಖ್ಯತೆ ನೀಡಬೇಕು ಎಂದ ಅವರು ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ಸಿಬಿಎಸ್ಸಿ ಪಠ್ಯಕ್ರಮವನ್ನು ಅಳವಡಿಸಲು ಆಡಳಿತ ಮಂಡಳಿ ಚಿಂತನೆ ನಡೆಸುತ್ತಿದ್ದು, ಪ್ರಗತಿಯ ಹಾದಿಯಲ್ಲಿದೆ ಎಂದು ಹೇಳಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಖಜಾಂಚಿ ಬಡುವಂಡ ಸುಬ್ರಮಣಿ, ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್ ಉಪಸ್ಥಿತರಿದ್ದರು.
ಶಿಕ್ಷಕ ಎಸ್.ಡಿ. ಪ್ರಶಾಂತ್ ಸ್ವಾಗತಿಸಿ, ಮಂಗಳ ಕಾರ್ಯಕ್ರಮ ನಿರೂಪಿಸಿ, ಎ.ಎಸ್. ರಶ್ಮಿ ಪ್ರಾಸ್ತಾವಿಕ ನುಡಿಗಳನ್ನಾಡಿ, ವೀಣಾ ವಂದಿಸಿದರು.