ವೀರಾಜಪೇಟೆ, ಆ. 3: ವೀರಾಜಪೇಟೆ ತಾಲೂಕಿನಾದ್ಯಂತ ಸುಮಾರು 150ಕ್ಕೂ ಅಧಿಕ ವರ್ತಕರು, ಕೆಲಸಗಾರರ ಸದಸ್ಯರುಗಳನ್ನು ಹೊಂದಿರುವ ತಾಲೂಕು ಚಿನ್ನಬೆಳ್ಳಿ ವರ್ತಕರು ಮತ್ತು ಕೆಲಸಗಾರರ ಸಂಘಟನೆ ವರ್ತಕರ, ಕೆಲಸಗಾರರ ಕ್ಷೇಮಾಭಿವೃದ್ಧಿ, ಕಲ್ಯಾಣದ ಮುಖ್ಯ ಉದ್ದೇಶವನ್ನಿಟ್ಟುಕೊಂಡಿದೆ ಎಂದು ಸಂಘದ ಅಧ್ಯಕ್ಷ ಕೆ.ಪಿ.ಪ್ರಶಾಂತ್ ಹೇಳಿದರು.
ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಸಂಘದ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಅವರು ವೀರಾಜಪೇಟೆಯಲ್ಲಿ ಸಂಘ ರೂ. 75 ಲಕ್ಷಗಳ ವೆಚ್ಚದಲ್ಲಿ ಬಹುದ್ದೇಶದ ಭವ್ಯ ಕಟ್ಟಡವನ್ನು ಕಟ್ಟಲು ಯೋಜನೆಯೊಂದನ್ನು ರೂಪಿಸಿದೆ. ಈಗಾಗಲೇ ಸಂಘಕ್ಕೆ ಜಾಗ ಖರೀದಿಸುವ ಒಪ್ಪಂದದ ಪ್ರಕಿಯೆ ಮುಂದುವರೆದಿದ್ದು, ಸಂಘಟನೆಯ ವೀರಾಜಪೇಟೆಯ ಪ್ರಮುಖರಾದ ಜಿ. ಉಲ್ಲಾಸ್ ಶೇಟ್, ಲೋಕೇಶ್ ಹಾಗೂ ಖಜಾಂಚಿ ಎ.ಎನ್. ದಶರಥ್ ಸೇರಿದಂತೆ ಗೋಣಿಕೊಪ್ಪಲಿನ ಕೆಲವು ಪ್ರಮುಖರು ಸಂಘ ಪ್ರಗತಿ ಪಥದಲ್ಲಿ ಮುನ್ನಡೆಯಲು ಕಾರಣರಾಗಿದ್ದಾರೆ. ಸಂಘದ ಕೆಲಸಗಾರರ ಕುಶಲಕರ್ಮಿಗಳಿಗೆ ಕೇಂದ್ರ ಸರಕಾರದ ಮಾಸಿಕ ಸಹಾಯಧನ ರೂ. 500ರ ಯೋಜನೆಗೆ ಸೇರ್ಪಡೆಗೊಳಿಸಲು ಪೂರ್ವ ಸಿದ್ಧತೆ ನಡೆಸಲಾಗಿದೆ. ಅನಾರೋಗ್ಯದಿಂದ ಬಳಲುವ ಕೆ¯ಸಗಾರರಿಗೂ ಸಂಘ ಸಹಾಯಹಸ್ತ ನೀಡಲಿದೆ. ಜು. 29ರಂದು ನಡೆದ ಸಂಘದ 18ನೇ ವಾರ್ಷಿಕೋತ್ಸವಕ್ಕೆ ಸಂಘದ ಎಲ್ಲ ಸದಸ್ಯರುಗಳು ಸಹಕಾರ ನೀಡಿದ್ದಾರೆ. ಇದರಿಂದ ಸಂಘದ ಸಂಘಟನೆ ಇನ್ನಷ್ಟು ಬಲಿಷ್ಠಗೊಳ್ಳಲು ಸಾಧ್ಯವಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಸಂಘ ಕೆಲಸಗಾರರ ಶ್ರೇಯೋಭಿವೃದ್ಧಿಯೊಂದಿಗೆ ಹಂತ ಹಂತವಾಗಿ ಸಮಾಜ ಸೇವೆಯನ್ನು ಹಮ್ಮಿಕೊಳ್ಳಲಿದೆ. ಇದಕ್ಕೂ ಸಂಘದ ಸದಸ್ಯರುಗಳ ಪರಸ್ಪರ ಸಹಕಾರವನ್ನು ನಿರೀಕ್ಷಿಸುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಉಲ್ಲಾಸ್ ಶೇಟ್, ಎ.ಎನ್.ದಶರಥ್ ಉಪಸ್ಥಿತರಿದ್ದರು.