ಸೋಮವಾರಪೇಟೆ, ಆ.3 : ತಾಲೂಕಿನ ಶಾಂತಳ್ಳಿ ಹೋಬಳಿಯ ನಾಡ ಕಚೇರಿಯಲ್ಲಿ ಅಧಿಕಾರಿಗಳು ನಾಪತ್ತೆಯಾಗಿದ್ದ ಹಿನ್ನೆಲೆ ರೈತರು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆಯಿತು.ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ನೇತೃತ್ವದಲ್ಲಿ ಸಾರ್ವಜನಿಕರು ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಅಸಮಾಧಾನ ಹೊರಹಾಕಿದರು. ಪ್ರಸಕ್ತ ವರ್ಷ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ 160 ಇಂಚು ಮಳೆಯಾಗಿದ್ದು, ಕಾಫಿ, ಕಿತ್ತಳೆ, ಮೆಣಸು, ಶುಂಠಿ, ಭತ್ತದ ಬೆಳೆ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಹಾನಿಯಾಗಿದೆ. ಸಾರ್ವಜನಿಕರು ಕಚೇರಿಗೆ ಪರಿಹಾರದ ಅರ್ಜಿಗಳನ್ನು ಸಲ್ಲಿಸಲು ಆಗಮಿಸಿದರೆ ಗ್ರಾಮ ಲೆಕ್ಕಾಧಿಕಾರಿಗಳು, ಉಪ ತಹಸೀಲ್ದಾರರು ಮತ್ತು ಕಂದಾಯ ಪರಿವೀಕ್ಷಕರು ಯಾರೂ ಇಲ್ಲ. ಸರ್ಕಾರಿ ಆಧಿಕಾರಿಗಳು ಇಂತಹ ಉಡಾಫೆ ತೋರುವದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಇಂದು ಕಚೇರಿಯಲ್ಲಿ ಕೇವಲ ಓರ್ವ ಗ್ರಾಮ ಲೆಕ್ಕಾಧಿಕಾರಿ ಮಾತ್ರ ಕಾರ್ಯನಿರ್ವಹಿಸುತ್ತಿರುವದನ್ನು ಮನಗಂಡ ಎಸ್.ಜಿ. ಮೇದಪ್ಪ ಅವರು, ಜಿಲ್ಲಾಧಿಕಾರಿ ಪಿ.ಐ. ಶ್ರೀ ವಿದ್ಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದರು.
ಅತೀವೃಷ್ಟಿ ಪರಿಹಾರ ನೀಡಲು ಸರ್ಕಾರ ಮುಂದಾಗಿದ್ದರೂ ಸಹ ಅರ್ಜಿಗಳನ್ನು ಸ್ವೀಕರಿಸಲು ಯಾವೊಬ್ಬ ಅಧಿಕಾರಿಯೂ ಇಲ್ಲ. ಅಧಿಕಾರಿಗಳೇ ಇಲ್ಲದ ಮೇಲೆ ಕಚೇರಿ ಇದ್ದೂ ಪ್ರಯೋಜನವಿಲ್ಲ. ಆದ್ದರಿಂದ ಕಚೇರಿಗೆ ಬೀಗ ಜಡಿಯುವದೇ ಉತ್ತಮ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ಒಂದೆರಡು ದಿನಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಸಮಸ್ಯೆ ಪರಿಹರಿಸ ಲಾಗುವದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಈ ಸಂದರ್ಭ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರಾದ ಕೆ.ಕೆ. ಗೋಪಾಲ್, ಹರಗ ಪ್ರಕಾಶ್, ಎಸ್.ಎ. ಪ್ರತಾಪ್, ಡಿ.ಎಸ್. ಲಿಂಗರಾಜು, ತಲ್ತಾರೆ ಶಾಂತಪ್ಪ, ಅಬ್ಬಿಮಠ ಬಾಚಳ್ಳಿ ಗ್ರಾಮದ ಮಾಚಯ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.