ಮಡಿಕೇರಿ, ಆ. 2: ಕೊಡಗಿನ ಕೊಡವರ ಅತ್ಯಂತ ಸಣ್ಣ ಕುಟುಂಬಗಳನ್ನು ಕ್ರೀಡೆಯ ಮೂಲಕ ಒಂದಾಗಿ ಬೆಸೆಯುವ ಉದ್ದೇಶದಿಂದ ಡಿ-ಒನ್ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ವತಿಯಿಂದ ಪ್ರಸಕ್ತ ಸಾಲಿನ ಅಕ್ಟೋಬರ್‍ನಲ್ಲಿ ‘ಕೇರ್ ಬಲಿ ನಮ್ಮೆ’(ಹಗ್ಗ ಜಗ್ಗಾಟ)ಯನ್ನು ಆಯೋಜಿಸುವದಾಗಿ ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ-ಒನ್ ಈವೆಂಟ್ ಮ್ಯಾನೇಜ್‍ಮೆಂಟ್ ಸಂಸ್ಥೆಯ ವ್ಯವಸ್ಥಾಪಕ ಗಗನ್ ಗಣಪತಿ, ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುವ ಹಗ್ಗ ಜಗ್ಗಾಟ ಸ್ಪರ್ಧೆಯ ಕುರಿತು ಮಾಹಿತಿ ನೀಡಿದರು. ಜಿಲ್ಲಾ ವ್ಯಾಪ್ತಿಯಲ್ಲಿ 850 ಕ್ಕೂ ಹೆಚ್ಚಿನ ಕೊಡವ ಕುಟುಂಬಗಳಿದ್ದು, ಇವುಗಳಲ್ಲಿ ಸಾಕಷ್ಟು ಕುಟುಂಬಗಳು ಅತ್ಯಂತ ಕಡಿಮೆ ಸದಸ್ಯರನ್ನು ಹೊಂದಿದ ಕುಟುಂಬಗಳಾಗಿದೆ. ಈ ಕುಟುಂಬಗಳಿಗೆ ಅತ್ಯಂತ ಯಶಸ್ವಿ ಯಾಗಿ ನಡೆಯುತ್ತಿರುವ ಹಾಕಿ ಮತ್ತು ಕ್ರಿಕೆಟ್ ಉತ್ಸವಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕೊರತೆಯನ್ನು ತುಂಬುವ ಉದ್ದೇಶದಿಂದ ಕೇರ್ ಬಲಿ ನಮ್ಮೆಯನ್ನು ಆಯೋಜಿಸು ತ್ತಿರುವದಾಗಿ ತಿಳಿಸಿದರು.
ಕೇರ್ ಬಲಿ ನಮ್ಮೆಯಲ್ಲಿ 8 ಮಂದಿ ಆಟಗಾರರು, ಇಬ್ಬರು ಹೆಚ್ಚುವರಿ ಆಟಗಾರರು ಮತ್ತು ತರಬೇತಿದಾರರನ್ನು ಒಳಗೊಂಡ ತಂಡಕ್ಕೆ ಅವಕಾಶವನ್ನು ನೀಡಲಾ ಗುತ್ತದೆ. ಒಂದು ತಂಡದಲ್ಲಿ ಕಡಿಮೆ ಸಂಖ್ಯೆಯ ಆಟಗಾರರ ಅವಶ್ಯಕತೆ ಇರುವದರಿಂದ ಸಣ್ಣ ಸಣ್ಣ ಕೊಡವ ಕಟುಂಬಗಳಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ. ಕೊಡಗಿನ ಎಲ್ಲಾ ಕೊಡವ ಕುಟುಂಬಗಳನ್ನು ಸೌಹಾರ್ದ ಯುತವಾಗಿ ಒಂದಾಗಿ ಬೆಸೆಯುವದೇ ಪಂದ್ಯಾವಳಿಯ ಉದ್ದೇಶವೆಂದು ತಿಳಿಸಿದರು. ಯಾವದೇ ಕೊಡವ ಕುಟುಂಬದ ಒಂದಕ್ಕಿಂತ ಹೆಚ್ಚಿನ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಗಗನ್ ಗಣಪತಿ ಮಾಹಿತಿ ನೀಡಿದರು.
ಪಂದ್ಯಾವಳಿಗೆ ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲೆಯ 30 ಕಡೆಗಳಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಆಸಕ್ತ ಕುಟುಂಬಗಳು ಹೆಚ್ಚಿನ ಮಾಹಿತಿಗಾಗಿ 9880600240, 6360189482 ವನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಬಾಳೆಯಡ ಪ್ರತೀಶ್ ಪೂವಯ್ಯ, ಕಲಿಯಂಡ ರಾಮಕೃಷ್ಣ ಹಾಗೂ ಚೆರುವಾಳಂಡ ನಂಜಪ್ಪ ಉಪಸ್ಥಿತರಿದ್ದರು.