ಆಲೂರು-ಸಿದ್ದಾಪುರ, ಆ. 2: ಆಲೂರು ಗ್ರಾಮ ಪಂಚಾಯಿತಿಯ ಕಣಿವೆ ಬಸವನಹಳ್ಳಿ ಮುಖ್ಯ ರಸ್ತೆಯಿಂದ ಸೇರುವ ಒಳರಸ್ತೆ ದುಸ್ಥಿತಿಯಿಂದ ಕೂಡಿದ್ದು, ಸಂಬಂಧಪಟ್ಟವರು ಯಾವದೇ ಕ್ರಮಕೈಗೊಳ್ಳಲು ಮುಂದಾಗದಿರುವದರಿಂದ ಪ್ರತಿನಿತ್ಯ ಶಾಲಾ-ಕಾಲೇಜು ಹಾಗೂ ಬೇರೆ ರೀತಿಯ ಕೆಲಸಗಳಿಗೆ ತೆರಳುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳಿದ್ದು, 200 ಕ್ಕೂ ಅಧಿಕ ಜನಸಂಖ್ಯೆಯನ್ನು ಗ್ರಾಮ ಹೊಂದಿದೆ. ಈ ಗ್ರಾಮಕ್ಕೆ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು ಒದಗಿಸಿದೆ ಆದರೆ ರಸ್ತೆ ಸರಿ ಇಲ್ಲದಿರುವದರಿಂದ ನೀರಿಗೆ ಬರಲು ಇಲ್ಲಿಯ ಕೆಲ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ಈ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿದ್ದು, ರಸ್ತೆ ಅವ್ಯವಸ್ಥೆ ಬಗ್ಗೆ ಸಂಬಂದಪಟ್ಟವರಿಗೆ ಮನವಿ ಮಾಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ತಾಲೂಕು ಪಂಚಾಯಿತಿಯಿಂದ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಕಲ್ಲು ರಸ್ತೆ ಮಾಡಿದರೂ ಕಳೆದ 7-8 ವರ್ಷಗಳ ಹಿಂದೆ ಒಂದಷ್ಟು ದೂರದವರೆಗೆ ಕಳಪೆ ಡಾಂಬರ್ ವ್ಯವಸ್ಥೆಯನ್ನು ಜಿಲ್ಲಾ ಪಂಚಾಯಿತಿಯಿಂದ ಮಾಡಿ ಕೈತೊಳೆದುಕೊಂಡಿದ್ದಾರೆ. ಅದು ಸಂಪೂರ್ಣ ಪೂರ್ಣಗೊಳ್ಳುವಷ್ಟರಲ್ಲಿ ಅನುದಾನ ಮುಕ್ತಾಯಗೊಂಡಿತು. ಇದಾದ ನಂತರ ಈ ಗ್ರಾಮಕ್ಕೆ ರಸ್ತೆ ಸರಿಪಡಿಸಲು ಯಾರು ಸಹ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ದ್ವಿಚಕ್ರ ಸವಾರರು ಇಲ್ಲಿ ನಿರ್ಮಾಣಗೊಂಡಿರುವ ಗುಂಡಿ ರಸ್ತೆಯಲ್ಲಿ ಮಳೆಗೆ ಗುಂಡಿಗಳಲ್ಲಿ ನೀರು ನಿಂತಿರುವದರಿಂದ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಗ್ರಾಮದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್‍ಗಾಗಿ ಸುಮಾರು 2 ರಿಂದ 3 ಕಿ.ಮೀ. ದೂರ ನಡೆದು ಹೋಗಬೇಕು. ಗುಂಡಿ ರಸ್ತೆಯಾಗಿರುವದರಿಂದ ನೀರೆಲ್ಲ ಈ ಗುಂಡಿಯಲ್ಲಿ ಇರುವದರಿಂದ ಕೆಲ ದ್ವಿಚಕ್ರ ಸವಾರರು ಗುಂಡಿ ರಸ್ತೆಯಲ್ಲಿ ಸಾಗುವದರಿಂದ ಕೊಳಚೆ ನೀರೆಲ್ಲ ಮಕ್ಕಳ ಮೇಲೆ ಹಾರುತ್ತಿವೆ. ಸೊಳ್ಳೆಗಳು ಆಕ್ರಮಿಸಿಕೊಂಡಿದ್ದು, ಇವು ಅಕ್ಕಪಕ್ಕದ ಮನೆಗಳಿಗೆ ಬರುವದರಿಂದ ರೋಗರುಜಿನಗಳು ಹರಡುವ ಭೀತಿಯಲ್ಲಿ ಇಲ್ಲಿಯ ಜನ ದಿನತಳ್ಳುವಂತಾಗಿದೆ. ಜೆಲ್ಲಿ ಮಣ್ಣು ರಸ್ತೆಯ ನೂರಾರು ವಿದ್ಯಾರ್ಥಿಗಳು ದೂರದ ಶನಿವಾರಸಂತೆ ಕುಶಾಲನಗರ ಸೋಮವಾರಪೇಟೆ ಸೇರಿದಂತೆ ವಿವಿಧೆಡೆಗಳಿಗೆ ತೆರಳುತ್ತಾರೆ ಆದರೆ ಇದನ್ನು ಸರಿಪಡಿಸಲು ಅನೇಕ ಬಾರಿ ಸಂಬಂಧÀಪಟ್ಟ ಸಭೆಗಳಲ್ಲಿ ಈ ಹಿಂದೆ ಪ್ರಸ್ತಾಪಿಸಿದರೂ ಸಹ ಪ್ರಯೋಜನ ಮಾತ್ರ ಶೂನ್ಯವಾಗಿದೆ. ಕೆಲವೆಡೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ವೇಗವಾಗಿ ಬರುವ ವಾಹನಗಳು ಗುಂಡಿಯಲ್ಲಿ ಬೀಳುವಂತಾಗಿದೆ.

- ಬಿ.ಎಂ. ರವಿ, ಕಣಿವೆ ಬಸವನಹಳ್ಳಿ ಗ್ರಾಮಸ್ಥ

ಈ ರಸ್ತೆಯನ್ನು ಕಳೆದ ಸಾಲಿನಲ್ಲಿ ವಿವಿಧÀ ಅನುದಾನ ಬಳಸಿ ಸರಿಪಡಿಸಲಾಗಿದೆ ಆದರೆ ಇದು ಸಂಪೂರ್ಣ ಕಳಪೆಯಿಂದ ಕೂಡಿರುವದಕ್ಕೆ ಇಲ್ಲಿ ನಿರ್ಮಾಣವಾಗಿರುವ ಬೃಹದಾಕಾರದ ಗುಂಡಿಗಳೇ ಸಾಕ್ಷಿಯಾಗಿದೆ.

- ಅಜಿತ್, ಕಣಿವೆ ಬಸವನಹಳ್ಳಿ ಗ್ರಾಮಸ್ಥ

ಈ ರಸ್ತೆ ದುಸ್ಥಿತಿಯ ಬಗ್ಗೆ ನನ್ನ ಗಮನಕ್ಕೆ ಯಾರು ತರದೆ ಇದ್ದುದರಿಂದ ಯಾವದೇ ಯೋಜನೆಯಲ್ಲಿ ಅನುದಾನ ಬಳಸಿ ಗ್ರಾಮಕ್ಕೆ ರಸ್ತೆ ಸರಿಪಡಿಸಲು ಮುಂದಾಗಿಲ್ಲ. ಇದೀಗ ನನ್ನ ಗಮನಕ್ಕೆ ಬಂದಿದ್ದು, ಜಿಲ್ಲಾ ಪಂಚಾಯಿತಿಯಿಂದ ಹಾಗೂ ಶಾಸಕರ ಮೂಲಕ ಗಮನ ಸೆಳೆಯಲಾಗುವದು ನಂತರ ಈ ಗ್ರಾಮಕ್ಕೆ ಅಗತ್ಯವಿರುವ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವದು.

- ಸರೋಜಮ್ಮ ಜಿಲ್ಲಾ ಪಂಚಾಯಿತಿ ಸದಸ್ಯೆ.

ಸುಮಾರು ಮೂರು ಕಿಲೋಮೀಟರ್ ದೂರವಿರುವ ರಸ್ತೆ ಇದಾಗಿದ್ದು, ಹೆಚ್ಚು ಅನುದಾನದ ಅಗತ್ಯವಿರುವದರಿಂದ ಗ್ರಾಮ ಪಂಚಾಯಿತಿಯಿಂದ ಅನುದಾನ ಬಳಸಲು ಕಷ್ಟವಾಗುತ್ತದೆ. ಶಾಸಕರಿಗೆ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೆ ಪತ್ರ ಬರೆಯಲಾಗುವದು.

-ವೀಣಾ ರಮೇಶ್, ಅಧÀ್ಯಕ್ಷೆ, ಗ್ರಾಮ ಪಂಚಾಯಿತಿ ಆಲೂರು-ಸಿದ್ದಾಪುರ. ಎರಡು ಬದಿಯಲ್ಲಿ ಕಾಡು ತುಂಬಿದ್ದು ನಡೆದಾಡಲು ಭಯಪಡುವಂತಾಗಿದೆ.

ವಿವಿಧ ಕೃಷಿ ಸಲಕರಣೆ ಸೇರಿದಂತೆ ಇನ್ನಿತರ ಸಾಮಗ್ರಿ ಪಟ್ಟಣದಿಂದ ಗ್ರಾಮಕ್ಕೆ ತರಬೇಕಾದರೆ ನಿಗದಿಗಿಂತ ಹೆಚ್ಚು ವಾಹನ ಬಾಡಿಗೆ ನೀಡಬೇಕು ಅನೇಕ ಬಾಡಿಗೆ ವಾಹನಗಳು ಈ ಗ್ರಾಮ ಎಂದ ತಕ್ಷಣ ಬರಲು ಹಿಂದೇಟು ಹಾಕುತ್ತಾರೆ. ಚಿತ್ರ ವರದಿ : ದಿನೇಶ್ ಮಾಲಂಬಿ